ದೇವರಿಗೆ ವಿಶೇಷ ಅಲಂಕಾರ, ಸರತಿ ಸಾಲಿನಲ್ಲಿ ದೇವರ ದರ್ಶನ
ಶಿವಮೊಗ್ಗ : ವೈಕುಂಠ ಏಕಾದಶಿಯ ಅಂಗವಾಗಿ ಶಿವಮೊಗ್ಗ ಸೇರಿದಂತೆ ಜಿಲ್ಲೆಯೆಲ್ಲೆಡೆ ಶುಕ್ರವಾರ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯಿತು. ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಸಾಕ್ಷತ್ ಶ್ರೀವಿಷ್ಣುವೇ ಧರೆಗಿಳಿದು ಬಂದು ಭಕ್ತರನ್ನು ಆಶೀರ್ವಾದಿಸುತ್ತಾನೆ ಎಂಬ ನಂಬಿಕೆ ಇದ್ದು, ಜನರು ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಿದರು. ಭಕ್ತರು ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಶಿವಮೊಗ್ಗದ ವೆಂಕಟೇಶ್ವರ ನಗರದ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಜಯನಗರದ ಶ್ರೀರಾಮ ಮಂದಿರ, ನವುಲೆಯ ವೆಂಕಟರಮಣ ದೇವಾಲಯ, ಕೋಟೆ ಶ್ರೀ ರಾಮಾಂಜನೇಯ ದೇವಾಲಯ, ಜಿ.ಎಸ್.ಕೆ.ಎಂ. ರಸ್ತೆಯ ವೆಂಕಟರಮಣ ದೇವಾಲಯ, ಅಶ್ವತ್ಥನಗರ, ದೇವಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿ ಹಲವು ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯಿತು.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಎಲ್ಲ ದೇವಾಲಯಗಳಲ್ಲೂ ಹಬ್ಬದ ವಾತಾವರಣ ಕಂಡು ಬಂದಿತು. ದೇವರ ದರ್ಶನದ ನಂತರ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.
ಬೆಳಗಿನ ಜಾವದಿಂದಲೇ ದೇವಾಲಯಗಳಿಗೆ ಭಕ್ತರು ನೂರಾರು ಸಂಖ್ಯೆಯಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿ ದಿನ ಭಕ್ತರ ಕೋರಿಕೆ ಈಡೇರಿಸಲು ಸಾಕ್ಷಾತ್ ವಿಷ್ಣುವೇ ಲಕ್ಷ್ಮೀ ಸಹಿತನಾಗಿ ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಭಕ್ತ ಸಮೂಹದ್ದು. ಹೀಗಾಗಿ ದೇವರ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.