ಪತ್ರಿಕಾಗೋಷ್ಟಿಯಲ್ಲಿ ರಿಟರ್ನಿಂಗ್ ಅಧಿಕಾರಿ ರವಿಚಂದ್ರನ್ ನಾಯಕ್ ಮಾಹಿತಿ
ಶಿವಮೊಗ್ಗ : ಮಾಮ್‍ಕೋಸ್ ಶಿವಮೊಗ್ಗದ ಆಡಳಿತ ಮಂಡಳಿಯ 2025 ನೇ ಸಾಲಿನ ಚುನಾವಣೆಯನ್ನು ಫೆ.04 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತದ ರಿಟರ್ನಿಂಗ್ ಅಧಿಕಾರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ರವಿಚಂದ್ರನ್ ನಾಯಕ್ ತಿಳಿಸಿದರು.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಸಂಘದಲ್ಲಿ 19 ಚುನಾಯಿತ ನಿರ್ದೇಶಕರ ಸ್ಥಾನಗಳು ತೆರವಾಗಲಿದೆ. 19 ನಿರ್ದೇಶಕ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 1, ಪರಿಶಿಷ್ಟ ಪಂಗಡ 1, ಮಹಿಳೆ 2, ಹಿಂದುಳಿದ ವರ್ಗ 2 ಮೀಸಲು ಸ್ಥಾನಗಳಾಗಿದ್ದು, ಸಾಮಾನ್ಯ ಸ್ಥಾನಗಳು 13 ಇರುತ್ತದೆ. ಮಾಮ್‍ಕೋಸ್ ಆಡಳಿತ ಮಂಡಳಿಯಲ್ಲಿ ಒಟ್ಟು 33,684 ಸದಸ್ಯರಿದ್ದು, ಅದರಲ್ಲಿ 11,580 ಜನ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಹೇಳಿದರು.
ನಾಮಪತ್ರವನ್ನು ಜ.18 ರಿಂದ ಬೆಳಗ್ಗೆ 11.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಸಲ್ಲಿಸಬಹುದಾಗಿದ್ದು, ಜ.27 ನಾಮಪತ್ರವನ್ನು ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮತ್ತು ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಜ.28 ರಂದು ಪ್ರಕಟಿಸಲಾಗುತ್ತದೆ. ಜ.29 ರಂದು ನಾಮಪತ್ರವನ್ನು ಹಿಂಪಡೆಯಲು ಕಡೆಯ ದಿನವಾಗಿದ್ದು, ಅಂದೇ ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿಯನ್ನು ಹಾಗೂ ಚಿಹ್ನೆಯನ್ನು ಪ್ರಕಟಣೆ ಮಾಡಲಾಗುವುದು. ಫೆ.04 ರಂದು ಬೆಳಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ಪ್ರಾರಂಭವಾಗಿ ಫಲಿತಾಂಶ ಪ್ರಕಟಿಸಲಾಗುವುದು.
ಸಂಘದ ಕಾರ್ಯವ್ಯಾಪ್ತಿಯು, ಕರ್ನಾಟಕ ರಾಜ್ಯದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳು ಹಾಗೂ ದಾವಣೆಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ. ತಾತ್ಕಾಲಿಕವಾಗಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು 9 ಮತದಾನ ಕೇಂದ್ರಗಳಿದ್ದು, ಅವುಗಳು ಶಿವಮೊಗ್ಗ, ಸಾಗರ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ತರೀಕೆರೆ, ಕೊಪ್ಪ, ಶೃಂಗೇರಿ ಮತ್ತು ಚನ್ನಗಿರಿ ಕೇಂದ್ರಗಳಾಗಿದ್ದು, ಇಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲು ಯೋಜಿಸಲಾಗಿದೆ ಎಂದರು.
ಈ ಚುನಾವಣೆಯನ್ನು ನಡೆಸಲು ರಿಟರ್ನಿಂಗ್ ಅಧಿಕಾರಿಗಳನ್ನಾಗಿ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಗಳನ್ನು ಹಾಗೂ ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನಾಗಿ ತಹಶೀಲ್ದಾರ್ ಗ್ರೇಡ್-2 ಎಂ.ಲಿಂಗರಾಜ್ ಇವರನ್ನು ಚುನಾವಣಾ ಪ್ರಾಧಿಕಾರವು ನೇಮಕ ಮಾಡಿರುತ್ತದೆ ಎಂದರು.
ಅಭ್ಯರ್ಥಿಗಳಿಗೆ, ಮತದಾರರಿಗೆ ಹಾಗೂ ಚುನಾವಣೆಗೆ ಸಂಬಂಧಪಟ್ಟ ಯಾವುದೇ ವ್ಯಕ್ತಿಗೆ ಈ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿ ಬೇಕಾದಲ್ಲಿ ಸಂಘದ ಕೇಂದ್ರ ಕಛೇರಿಯಲ್ಲಿರುವ ರಿಟರ್ನಿಂಗ್ ಅಧಿಕಾರಿಯವರ ಶಾಖೆಗೆ ಅಥವಾ ದೂರವಾಣಿ ಸಂಖ್ಯೆ : 08182-250514 ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ತಹಶೀಲ್ದಾರ್-2 ಎಂ.ಲಿಂಗರಾಜ್, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಉಪಸ್ಥಿತರಿದ್ದರು.
ರವಿಚಂದ್ರನ್ ನಾಯಕ್, ರಿಟರ್ನಿಂಗ್ ಅಧಿಕಾರಿ –
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆಯು ಶಿವಮೊಗ್ಗ ಎ.ಪಿ.ಎಂ.ಸಿ. ಆವರಣದಲ್ಲಿರುವ ಮಾಮ್ ಕೋಸ್ ಸಭಾಂಗಣದಲ್ಲಿ ನಡೆಯುತ್ತದೆ. ಡಿ-ಮಸ್ಟರಿಂಗ್ ಆದ ತಕ್ಷಣ ಮತ ಎಣಿಕೆ ಪ್ರಾರಂಭವಾಗುತ್ತದೆ ಹಾಗೂ ಮತ ಎಣಿಕೆಯಾದ ಕೂಡಲೇ ಫಲಿತಾಂಶವನ್ನು ಪ್ರಕಟಿಸಲಾಗುವುದು.