
ಪತ್ರಿಕಾಗೋಷ್ಠಿಯಲ್ಲಿ ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ್.ಆರ್ ಮಾಹಿತಿ
ಶಿವಮೊಗ್ಗ : ಮಲೆನಾಡಿನ ಉದ್ಯಮಶೀಲ ಪರಿಸರವನ್ನು ಅಭಿವೃದ್ಧಿಪಡಿಸಲು ಮೀಸಲಾಗಿರುವ ಪಿಇಎಸ್ ಟ್ರಸ್ಟ್ ಶಿವಮೊಗ್ಗ ಇದರ ಆಶ್ರಯದಲ್ಲಿನ ಅನ್ವೇಷಣಾ ಇನ್ನೋವೇಷನ್ ಅಂಡ್ ಎಂಟರ್‌ಫ್ರೀನ್ಯೋರಲ್ ಫೋರಮ್ ಜ.18 ರಂದು ‘ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನ 2025’ ನ್ನು ಆಯೋಜಿಸಿದೆ ಎಂದು ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ್.ಆರ್ ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಂದ ಉದ್ಯಮಶೀಲರ ಪರಿವರ್ತನೆಯ ಶಕ್ತಿ ಹಾಗೂ ಭಾರತದ ಆರ್ಥಿಕ ಬೆಳವಣಿಗೆಯ ಭವಿಷ್ಯ ರೂಪಿಸುವ ಸಾಮರ್ಥ್ಯ ಹೊಂದಿದೆ ಎಂಬ ನಂಬಿಕೆಯಲ್ಲಿ ಅನ್ವೇಷಣಾ ವೇದಿಕೆಯನ್ನು ಸ್ಥಾಪಿಸಿದೆ. ಕಳೆದ ವರ್ಷ ನಡೆದ ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನದಲ್ಲಿ, ಮಲೆನಾಡಿನ 1,500ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದು, ದೊಡ್ಡ ಮಟ್ಟದ ಸ್ಪಂದನೆಯನ್ನು ಪಡೆದಿತ್ತು ಎಂದರು.
ಅದೇ ರೀತಿ ಈ ಬಾರಿಯ ಸಮ್ಮೇಳನವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಸಜ್ಜಾಗಿದ್ದು, 250 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಆಕಾಂಕ್ಷಿಗಳು ಹಾಗೂ 400 ಕ್ಕೂ ಹೆಚ್ಚು ರೈತರ ಉತ್ಪಾದಕ ಸಂಸ್ಥೆಗಳ ಸದಸ್ಯರು (ಎಫ್ ಪಿ ಓ) ಮತ್ತು ರೈತ ಬಾಂಧವರು ಪಾಲ್ಗೊಳ್ಳಲ್ಲಿದ್ದಾರೆ. 25ಕ್ಕೂ ಹೆಚ್ಚು ಆಯ್ದ ಸ್ಟಾರ್ಟ್ ಅಪ್ ಗಳು ತಮ್ಮ ವಿಶೇಷ ತಂತ್ರಜ್ಞಾನವನ್ನು ಪ್ರದರ್ಶಿಸಲಿದ್ದಾರೆ. 30 ಕ್ಕೂ ಹೆಚ್ಚು ನುರಿತ ತಜ್ಞರು, ಮಾರ್ಗದರ್ಶಕರು ಹಾಗೂ ಹೂಡಿಕೆದಾರರರು ಭಾಗವಹಿಸಲಿದ್ದು ಸುಮಾರು 1000 ಕ್ಕೂ ಹೆಚ್ಚು ಯುವಜನರು ಈ ಸಮ್ಮೇಳನದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ಅನ್ವೇಷಣಾ ಇಂಕ್ಯುಬೇಶನ್ ಪ್ರೋಗ್ರಾಂನ ಮೊದಲ ಹಂತದಲ್ಲಿ ಅಭಿವೃದ್ಧಿಗೊಂಡ 10 ನವೋದ್ಯಮಗಳು ಹೊರ ಹೊಮ್ಮಲಿದ್ದು, ಎರಡನೇ ಹಂತದಲ್ಲಿ 20 ನವೋದ್ಯಮಗಳು ಅನ್ವೇಷಣಾದಿಂದ ಮಾರ್ಗದರ್ಶನವನ್ನು ಪಡೆಯಲು ಸಜ್ಜಾಗಿವೆ. ಮಾರ್ಗದರ್ಶಕರು ಹಾಗೂ ಹೂಡಿಕೆದಾರರ ಭೇಟಿ ಮತ್ತು ಜ್ಞಾನವಿನಿಮಯ, ಇವುಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಅನುಕೂಲವಾಗುವಂತೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನದ ಉದ್ಘಾಟನೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆಯ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಅನ್ವೇಷಣಾದ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಂ. ಪಾಟೀಲ್ ಆಗಮಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಪಿಇಎಸ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಆರ್.ಸುಭಾಷ್ ಅವರು ಅನ್ವೇಷಣಾ ಸಂಸ್ಥೆಯ ಕುರಿತು ಮಾತನಾಡಲಿದ್ದಾರೆ. ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿಗಳಾದ ಡಾ. ನಾಗರಾಜ.ಆರ್ ಅವರು ಪಿಇಎಸ್ ಟ್ರಸ್ಟ್ ಹಾಗೂ ಅನ್ವೇಷಣಾದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿಗಳನ್ನು ನೀಡಲಿದ್ದಾರೆ. ಅನ್ವೇಷಣಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹರೀಶ್ ಗದಗಿನ್‌ರವರು ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ವಹಿಸಲಿದ್ದಾರೆ ಎಂದರು.
ಪಿಇಎಸ್ ಟ್ರಸ್ಟ್ ಮತ್ತು ಅನ್ವೇಷಣಾ, ಮಲೆನಾಡಿನ ಆವಿಷ್ಕಾರ ಮತ್ತು ಉದ್ಯಮಶೀಲತೆಗೆ ಪೂರಕವಾದ ಪರಿಸರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿ. ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನಗಳಂತಹ ಕಾರ್ಯಕ್ರಮಗಳ ಮೂಲಕ, ಅನ್ವೇಷಣಾ ಆವಿಷ್ಕಾರ ಮತ್ತು ಸಹಕಾರಕ್ಕೆ ವೇದಿಕೆಯಾಗಿ ಸೇವೆಸಲ್ಲಿಸುತ್ತಿದ್ದು, ಇದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಹರೀಶ್ ಉಪಸ್ಥಿತರಿದ್ದರು.
ಬಿ.ಆರ್.ಸುಭಾಷ್, ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ –
ಜ.18 ರಂದು ಮಲೆನಾಡು ಸ್ಟಾರ್ಟ್ ಅಪ್ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ. ಶಿವಮೊಗ್ಗದಲ್ಲಿ ಒಂದು ಅಗ್ರಿಕಲ್ಚರ್ ಮಾರ್ಕೆಟ್ ಕೊಡುವ ಉದ್ದೇಶವಿದೆ. ಸಮ್ಮೇಳನದಲ್ಲಿ ಸುಮಾರು 20 ರಿಂದ 25 ಆಯ್ದ ಸ್ಟಾರ್ಟ್ ಅಪ್ ಗಳು ವಿಶೇಷ ತಂತ್ರಜ್ಞಾನಗಳ ಪ್ರದರ್ಶನ ನೀಡಲಿವೆ.