
ʼಕ್ರಾಫ್ಟ್ ಆಫ್ ಮಲೆನಾಡುʼ ಮಹಿಳಾ ಸ್ವಸಹಾಯ ಗುಂಪುಗಳಿಗೆ ಬೃಹತ್ ಅವಕಾಶ : ಸಿಇಓ ಎನ್. ಹೇಮಂತ್
ಶಿವಮೊಗ್ಗ : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜ. 24 ರಿಂದ ಮೂರು ದಿನಗಳ ಕಾಲ ನಗರದ ಅಲ್ಲಮಪ್ರಭು ಉದ್ಯಾನದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೃಹತ್ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ʼಕ್ರಾಫ್ಟ್ ಆಫ್ ಮಲೆನಾಡುʼ ಎಂಬ ಬ್ರಾಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಈ ಮೇಳಕ್ಕಿದೆ.
ಪುಷ್ಪ ಸಿರಿ ಹೆಸರಿನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಓ ಎನ್ ಹೇಮಂತ್ ಮಾಹಿತಿ ನೀಡಿದರು. 75 ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಇವರುಗಳ ಸಹಯೋಗದೊಂದಿಗೆ ಜ.24 ರಿಂದ 26 ರ ಬೆಳಿಗ್ಗೆ 9 ಗಂಟೆಯಿಂದ ರಿಂದ ರಾತ್ರಿ 9 ಗಂಟೆವರಗೆ 62ನೇ ಫಲ-ಪುಷ್ಪ ಪ್ರದರ್ಶನ, ಮಲೆನಾಡು ಕರಕುಶಲದ ಸರಸ್ ಮೇಳ ಉತ್ಸವ ಹಾಗೂ ಮನರೇಗಾ ಯೋಜನೆಯ ಮಾಹಿತಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ʼಕ್ರಾಫ್ಟ್ ಆಫ್ ಮಲೆನಾಡುʼ ಎಂಬ ಬ್ರಾಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ಬೃಹತ್ ಅವಕಾಶವನ್ನು ನೀಡಲಾಗಿದೆ. ʼಕ್ರಾಫ್ಟ್ ಮಲೆನಾಡು” ಮಹಿಳೆಯರ ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಸಜ್ಜಾಗಿದ್ದು, ಈ ಸುವರ್ಣಾವಕಾಶವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ “ಕ್ರಾಫ್ಟ್ ಆಫ್ ಮಲೆನಾಡು” ಬ್ರಾಂಡಿಂಗ್ ಕುರಿತಾದ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಜಿ, ಜಿಲ್ಲಾ ಉದ್ಯಾನ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹಾಜರಿದ್ದರು.
ಕವಿಶೈಲ-ರೇಣುಕಾ ದೇವಾಲಯ
ಜಿಲ್ಲೆಯ ಹೆಸರಾಂತ ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಮನೆಯನ್ನು ಪುಷ್ಪಗಳ ಮೂಲಕ ತಯಾರಿ ಮಾಡಿದ್ದು, ಸುಮಾರು 28 ಅಡಿ ಎತ್ತರದ ಹೂವಿನ ಕಲಾಕೃತಿಯ ಕವಿಶೈಲವನ್ನು ನಿರ್ಮಾಣ ಮಾಡಲಾಗುವುದು ಹಾಗೂ ಚಂದ್ರಗುತ್ತಿಯ ರೇಣುಕಾ ದೇವಾಲಯವನ್ನು ಮರುಸೃಷ್ಟಿಸಲಾಗುತ್ತಿದ್ದು ಪ್ರದರ್ಶನದ ಆಕರ್ಷಣೆಯಾಗಲಿದೆ. ಫಲಪುಷ್ಪ ಉತ್ಸವದಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರು ತಯಾರಿಸಿದ 100ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ.