ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹ
ಶಿವಮೊಗ್ಗ : ಆರ್.ಎಸ್.ಎಸ್. ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ. ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಕೊಲ್ಲಿ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸುಮೊಟೋ ಕೇಸ್ ಹಾಕಬೇಕು ಮತ್ತು ಖರ್ಗೆಯವರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಎಂದರೆ ಒಂದು ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಹಿಂದುತ್ವದ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇಡೀ ದೇಶದ ಜನರು ಆರ್.ಎಸ್.ಎಸ್.ನ್ನು ಒಪ್ಪಿದ್ದಾರೆ ಎಂದರು.
ಖರ್ಗೆ ಅವರಿಗೆ ಅಧಿಕಾರದ ದಾಹ ಹೆಚ್ಚಾಗಿದೆ. ಖರ್ಗೆಯವರಂತಹ ಹಿರಿಯ ರಾಜಕಾರಣಿ ಹೀಗೆ ಮಾತನಾಡಬಾರದಿತ್ತು. ಮುಸಲ್ಮಾನರನ್ನು ಸಂತೃಪ್ತಿಗೊಳಿಸುವ ದೃಷ್ಟಿಯಿಂದ ಅವರು ಈ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ ಮತ್ತು ನೆಹರೂ ಅವರೂ ಕೂಡ ಆರ್.ಎಸ್.ಎಸ್. ನಿಷೇಧಿಸಲು ಹೊರಟಿದ್ದರು. ಆದರೆ ಆಗಲಿಲ್ಲ. ಆಗವುದೂ ಇಲ್ಲ. ಖರ್ಗೆಯವರು ಉದ್ವೇಗದಲ್ಲಿ ಹೇಳಿದ್ದರೆ ಆ ಮಾತು ಬೇರೆ. ಆದರೆ ಉದ್ದೇಶಪೂರ್ವಕವಾಗಿ ಹೇಳಿದ್ದರೆ, ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ನನ್ನ ವಿರುದ್ದ ಸುಮೊಟೊ ಕೇಸ್ ದಾಖಲಿಸಿದಂತೆ ಅವರ ಮೇಲೂ ಕೂಡ ಸುಮೊಟೊ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.