ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಮಾಹಿತಿ
ಶಿವಮೊಗ್ಗ : ಫೆ.04 ರ ರಥಸಪ್ತಮಿಯಂದು ಕ್ರಾಂತಿವೀರ ಬ್ರಿಗೇಡ್‍ನ್ನು ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವುದು ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಈ ಸಮಾರಂಭದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಸಾಧು ಸಂತರ ಸಾಮೂಹಿಕ ಪಾದ ಪೂಜೆ ಮಾಡಲಾಗುವುದು. ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಪೂರ್ವತಯಾರಿ ಕೂಡ ನಡೆದಿದೆ. ಡಿ.02 ರಂದು ಹುಬ್ಬಳ್ಳಿಯಲ್ಲಿ ಬ್ರಿಗೇಡ್ ಸಮಿತಿ ಸಭೆ ನಡೆಯಲಿದೆ. ಮಾರ್ಗದರ್ಶಕರ ತಂಡ ಕೂಡ ರಚನೆಯಾಗಿದ್ದು, ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಸಭೆಯಲ್ಲಿ ಮಠ, ಮಂದಿರಗಳ ಶಾಲಾ, ಕಾಲೇಜುಗಳ ರೈತರ ಜಮೀನುಗಳನ್ನು ವಕ್ಪ್ ಆಸ್ತಿಗೆ ಸೇರಿಸಲು ಹೊರಟಿರುವುದನ್ನು ಖಂಡಿಸಿ ಕೂಡಲೇ ಅದನ್ನು ರದ್ದುಗೊಳಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿಗಳು ಕೇವಲ ಹೇಳಿಕೆ ನೀಡಿದರೆ ಸಾಲದು, ಪಹಣಿಯಲ್ಲಿ ಇರುವ ವಕ್ಪ್ ಎಂಬ ಶಬ್ಧವನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ಮಹಾಲಿಂಗ ಶಾಸ್ತ್ರಿ, ಬಾಲು, ಈ.ವಿಶ್ವಾಸ್, ಮೋಹನ್ ಕುಮಾರ್ ಜಾಧವ್, ಶ್ರೀಕಾಂತ್, ಶಿವಾಜಿ, ಗುರು ಶೇಠ್, ಗಂಗಾಧರ್ ಇದ್ದರು.
ಕೆ.ಎಸ್.ಈಶ್ವರಪ್ಪ, ರಾಷ್ಟ್ರಭಕ್ತರ ಬಳಗದ ಸಂಚಾಲಕ :
ಮುಖ್ಯಮಂತ್ರಿಗಳು ಕೂಡಲೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಅಧಿಕಾರ ಕಳೆದುಕೊಳ್ಳುವ ಭಯದಿಂದ ಅವರು ಹೀಗೆ ವಿಳಂಬ ಮಾಡುತ್ತಿದ್ದಾರೆ. ಆ ಬಗ್ಗೆ ಪರ, ವಿರೋಧಗಳು ಏನೇ ಇರಲಿ. ಮೊದಲು ಸದನದಲ್ಲಿ ನಿರ್ಧಾರ ತೆಗೆದುಕೊಳ್ಳಲಿ. ಇದರ ನಡುವೆ ಅಹಿಂದ ಸಮಾವೇಶದ ಬಗ್ಗೆ ಮಾತನಾಡುವ ಅವರು ಅದಕ್ಕೂ ಮೊದಲು ಜಾತಿ ಜನಗಣತಿ ಬಿಡುಗಡೆ ಮಾಡಲಿ.