ಸೊರಬ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಭೂಮಿ ಹುಣ್ಣಿಮೆ ಪ್ರಯುಕ್ತ ಗುರುವಾರ ರೈತರು ತಾವು ಬೆಳೆದ ವಿವಿಧ ಬೆಳೆಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಭೂಮಿ ತಾಯಿಗೆ ನಮಿಸಿದರು.ಭೂಮಿಯನ್ನು ಹೆಣ್ಣಿನಂತೆ ಗೌರವಿಸಿ, ಗರ್ಭಿಣಿ ಹೆಣ್ಣಿಗೆ ಸೀಮಂತಶಾಸ್ತ್ರ ಮಾಡುವಂತೆ, ತೆನೆಯೊಡೆಯುವ ಬೆಳೆಗೆ ಕೃಷಿ ಕುಟುಂಬಗಳು ಪೂಜೆ ಸಲ್ಲಿಸಿ ಎಡೆ ಅರ್ಪಿಸುವ ಸಂಪ್ರದಾಯ ಮಲೆನಾಡು ಭಾಗದಲ್ಲಿದೆ. ಜೊತೆಗೆ ತಾವು ಬೆಳೆದ ತೋಟಗಳಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ರೈತ ಕುಟುಂಬಗಳು ಮುಂಗಾರಿನಲ್ಲಿ ಭೂಮಿ ಹದಗೊಳಿಸಿ ಬಿತ್ತನೆ ಮಾಡಿ ತೆನೆ (ಹೊಡಿ) ಬಿಡುವ ಸಮಯದಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ಎಡೆ ಹಿಡಿದು ಪೂಜೆ ಮಾಡುವುದು ಸಂಪ್ರದಾಯ. ಈ ವರ್ಷ ಸುರಿದ ಮಳೆಯಿಂದ ಭತ್ತದ ಬೆಳೆಗೆ ಅನುಕೂಲವಾಗಿದೆ. ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಹೊಲ-ಗದ್ದೆಗಳಲ್ಲಿ ಕುಟುಂಬ ಸೇಮೇತರಾಗಿ ಸ್ನೇಹಿತರೊಡನೆ ಸಹ ಭೋಜನ ಮಾಡುವ ಪದ್ಧತಿಗೆ ಕಳೆದ ಎರಡ್ಮೂರು ದಿನಗಳಿಂದ ಎಡಬಿಡದೇ ಮಳೆ ಅಡ್ಡಿ ಮಾಡಿತು. ಪೂಜೆ ಸಲ್ಲಿಸಿದ ಬಳಿಕ ಬಹುತೇಕರು ಮನೆಯಲ್ಲಿಯೇ ಭೋಜನ ಮಾಡುವ ಪರಿಸ್ಥಿತಿ ಎದುರಾಯಿತು.
ಮಧ್ಯಾಹ್ನದ ಹೊತ್ತಿಗೆ ಕುಟುಂಬದವರೆಲ್ಲರೂ ತಮ್ಮ ಬೆಳೆಗೆ ಸೀರೆ-ಕುಪ್ಪಸ, ತಾಳಿ, ಮೂಗುತಿ ತೊಡಿಸಿ ವಿಶೇಷ ಪೂಜೆ ಸಲ್ಲಿಸಿ, ಬೆಳೆಗೆ, ಗೂಳಿ(ಕಾಗೆ)ಗೆ, ಇಲಿಗಳಿಗೆ ಒಂದೊಂದು ಎಡೆ ನೀಡಿದರು. ಒಂದು ಕೊಟ್ಟೆ ಕಡುಬನ್ನು ಜಮೀನಿನಲ್ಲಿ ಹೂತು, ಆ ಜಮೀನಿನ ಬೆಳೆಯನ್ನು ಒಕ್ಕಲು ಮಾಡುವ ಸಂದರ್ಭದಲ್ಲಿ ಕಿತ್ತು ತಿನ್ನುವ ಸಂಪ್ರದಾಯ ಇದೆ.
ಮುಂಜಾನೆಯೇ ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ಚರಗ ತುಂಬಿಕೊಂಡ ರೈತರು ತಮ್ಮ ಹೊಲಕ್ಕೆ ಹೋಗಿ ‘ಹಚ್ಚಂಬ್ಲಿ ಹರಬಿಸೊಪ್ಪು ಹಿತ್ತಲಾಗಿರೋ ದಾರಿರೆಕಾಯಿ ಭೂಂಕವ್ವನ ಬಯ್ಕೆಬಾನ ಎದ್ದೆದ್ ಉಣ್ಣೆ ಭೂಂಕವ್ವೋ.. ಹೋಯ್ ಹೋಯ್’ ಎಂದು ಕೂಗುತ್ತಾ ಹೊಲಕ್ಕೆಲ್ಲಾ ಚರಗಾ ಚೆಲ್ಲಿದರು.