ಶಿವಮೊಗ್ಗ : ನಾಡಿನ ಹೆಸರಾಂತ ಮೇದಾವಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಕೇವಲ ಇಂಜಿನಿಯರ್‌ಗಳ ದಿವಸವಾಗಿ ಆಚರಿ ಸುವ ಬದಲು ನಾಡಿನ ದಿನಾಚರಣೆ ಯಾಗಿ ನಾಡಿನಾದ್ಯಂತ ಆಚರಿಸುವಂತಾ ಗಬೇಕೆಂದು ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.
ನಗರದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಏರ್ಪ ಡಿಸಲಾಗಿದ್ದ ಭಾರತ ರತ್ನ ಡಾ. ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಹಾಗೂ ಇಂಜಿನಿಯರ‍್ಸ್ ಡೇ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸರ್.ಎಂ.ವಿ. ಜನ್ಮದಿನಾಚರಣೆಯನ್ನು ಕೇವಲ ಇಂಜಿನಿಯರ‍್ಸ್ ಡೇ ದಿನಾಚರಣೆಗೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದರು.
ಕನ್ನಡ ನಾಡಿನಲ್ಲಿ ಶರಾವತಿ ವಿದ್ಯುತ್ ಕೇಂದ್ರ, ಕೆ.ಆರ್.ಎಸ್., ಮೈಸೂರು ವಿವಿ ಸ್ಥಾಪನೆ, ಎಸ್‌ಬಿಎಂ ಬ್ಯಾಂಕ್ ಸ್ಥಾಪನೆ, ವಿಐಎಸ್‌ಎಲ್ ಕಾರ್ಖಾನೆ ಸ್ಥಾಪನೆ ಹೀಗೆ ಹಲವಾರು ಹೊಸ ಯೋಜನೆಗಳನ್ನು ಹಾಗೂ ಕೇಂದ್ರಗಳನ್ನು ಸ್ಥಾಪಿಸಿದಂತಹ ಕೀರ್ತಿ ಸರ್‌ಎಂವಿ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ನಾಯಕನ ಜನ್ಮದಿನಾಚರಣೆಯನ್ನು ಕೇವಲ ಇಂಜಿನಿಯರ್‌ಗಳು ಮಾತ್ರ ಆಚರಿಸದೇ ಮೈಸೂರು, ಮಂಡ್ಯ ಭಾಗದಲ್ಲಿ ರೈತರು, ಶರಾವತಿ ಭಾಗದಲ್ಲಿ ಮೆಸ್ಕಾಂ ಕೆಪಿಟಿಸಿಎಲ್‌ನ ಉದ್ಯೋಗಿ ಗಳು, ಎಸ್‌ಬಿಎಂ ಬ್ಯಾಂಕ್ ನೌಕರರು, ಮೈಸೂರು ವಿವಿಯ ನೌಕರರು, ವಿಐಎಸ್‌ಎಲ್ ಕಾರ್ಖಾನೆಯ ಕಾರ್ಮಿಕರು ಹೀಗೆ ಎಲ್ಲರೂ ಆಚರಿಸುವ ಮೂಲಕ ನಾಡಿನ ಹಬ್ಬವಾಗಿ ಆಚರಿಸಬೇಕೆಂದರು.
ರಾಜ್ಯ ಸರ್ಕಾರ ವಚನಕಾರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ವಾಗಿ ಹೇಗೆ ಆಚರಿಸುತ್ತಿದೆಯೋ ಅದೇ ರೀತಿ ಸರ್‌ಎಂವಿ ಅವರ ಜನ್ಮದಿನಾ ಚರಣೆಯನ್ನೂ ಸಹ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದ ಅವರು, ಈ ಜ್ಞಾನಿಯ ವ್ಯಕ್ತಿತ್ವ ಹಾಗೂ ಆಳ, ಅಗಲವನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ಇದ ರಿಂದಾಗಿಯೇ ಇವರ ಬಗ್ಗೆ ದಂತ ಕಥೆಗಳು ಹುಟ್ಟಿಕೊಂಡಿವೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ದಿಢೀರ್ ಧೂಮಕೇತುಗಳು ಹುಟ್ಟಿಕೊಳ್ಳುತ್ತಿವೆ. ಇದರಿಂದಾಗಿ ಇಂತಹ ಮಹಾನ್ ನಕ್ಷತ್ರಗಳು ಕಣ್ಮರೆಯಾಗುತ್ತಿವೆ ಎಂದು ಮಾರ್ಮಿಕವಾಗಿ ನುಡಿದ ಅವರು, ಯಾವುದೇ ಒಂದು ಯೋಜನೆಯನ್ನು ರೂಪಿಸಬೇಕಾದರೆ ದೂರದೃಷ್ಟಿಯನ್ನು ಸರ್‌ಎಂವಿ ಹೊಂದಿರುತ್ತಿದ್ದರು. ಆದರೆ ಇತ್ತೀಚಿನ ಯೋಜನೆಗಳು ಯಾವುದೇ ದೂರದೃಷ್ಟಿಯನ್ನು ಹೊಂದಿರದೆ ಯೋಜ ನೆಗಳು ರೂಪಗೊಳ್ಳುತ್ತವೆ. ಅಲ್ಲದೆ ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯೂ ಸಹ ನಡೆದುಬಿಡುತ್ತದೆ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಮಾಜಿ ಅಧ್ಯಕ್ಷ ಡಿ.ಎಸ್.ಅರುಣ್, ಕಾರ್ಯದರ್ಶಿ ಬಿ.ಆರ್.ಸಂತೋಷ್, ಪಿ.ರುದ್ರೇಶ್ ಮೊದಲಾದವರಿದ್ದರು.