ಶಿವಮೊಗ್ಗ: ಆಗುಂಬೆಯಲ್ಲಿ ನಾಪತ್ತೆಯಾಗಿದ್ದ ಯುವತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ಆರೋಪಿಯನ್ನು ಆಗುಂಬೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಣಿಕಂಠ ಎಂಬಾತ ನಾಲೂರು ಸಮೀಪದವನಾಗಿದ್ದು, ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಾಲೂರು ಸಮೀಪ ಹೊಂಡದಲ್ಲಿ ಹಾಕಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ತಾಲೂಕಿನ ಹಸಿಮನೆ ಗ್ರಾಮದ ಕುಶಾಲ್ ಅವರ ಮಗಳು ಪೂಜಾ ಎ ಕೆ(24) ಮೃತ ಯುವತಿಯಾಗಿದ್ದಾಳೆ.
ಯುವತಿ ಪೂಜಾ ಜೂನ್ 30ರಂದು ನಾಪತ್ತೆಯಾಗಿದ್ದರು. ಯುವತಿಯ ಕೊಲೆ ಆರೋಪಿ, ತನ್ನ ಮೇಲೆ ಅನುಮಾನವೂ ಬರಬಾರದೆಂದು ಪೊಲೀಸರೊಂದಿಗೆ ಓಡಾಡಿಕೊಂಡಿದ್ದ ಎಂಬ ಮಾಹಿತಿ ದೊರೆತಿದೆ. ಆದರೆ ಮಾಳೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಕೆ ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಂಗನಾಥ್ ಅಂತರಗಟ್ಟಿ ನೇತೃತ್ವದ ಪೊಲೀಸ್ ತಂಡದ ತನಿಖೆಯ ಚಾಕಚಕ್ಯತೆಯಿಂದ, ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಆರೋಪಿಯು ಜೈಲು ಸೇರುವಂತಾಗಿದೆ.
ಪೊಲೀಸರು ಯುವತಿಯ ಮೊಬೈಲ್ ಫೋನ್, ಕಾಲ್ ರೆಕಾರ್ಡ್ ವಿವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಯುವತಿಯ ಕುರಿತಂತೆ ಮಾಹಿತಿ ಕಲೆ ಹಾಕಿದ್ದರು. ಹಲವು ಜನರನ್ನು ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ಯುವತಿಯ ಸಂಬಂಧಿ ಹಾಗೂ ಪಿಕ್‌ಅಪ್ ವಾಹನ ಚಾಲನೆ ಕೆಲಸ ಮಾಡುತ್ತಿದ್ದ ನಾಲೂರು ಒಡೆದ ಕೊಡಗೆ ಗ್ರಾಮದ ನಿವಾಸಿ ಮಣಿಕಂಠ (25) ಎಂಬಾತ, ಪೂಜಾಳು ಕೆಂಪು ಕಾರೊಂದರಲ್ಲಿ ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ತಾನೂ ಕೂಡ ಆಕೆಯ ಮೊಬೈಲ್ ಪೋನ್ ಗೆ ಕರೆ ಮಾಡಿ ಮಾತನಾಡಿದ್ದೆ ಎಂದು ತಿಳಿಸಿದ್ದ.
ಮಣಿಕಂಠ ನೀಡಿದ ಕಾರಿನ ಮಾಹಿತಿ ಆಧಾರದ ಮೇಲೆ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು.
ಎರಡ್ಮೂರು ದಿನಗಳ ಕಾಲ ಮಣಿಕಂಠ ಕೂಡ ಪೊಲೀಸರು ಹಾಗೂ ಯುವತಿಯ ಕುಟುಂಬದವರ ಜೊತೆಗೇ ಪೂಜಾಳ ಪತ್ತೆ ಕಾರ್ಯದಲ್ಲಿ ಓಡಾಡಿಕೊಂಡಿದ್ದ. ಇಡೀ ಪ್ರಕರಣ ನಿಗೂಢವಾಗಿ ಪರಿಣಮಿಸಿತ್ತು. ಆ ಬಳಿಕ ಮಣಿಕಂಠನ ಸ್ನೇಹಿತನೋರ್ವನನ್ಜು ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ಯುವತಿ ನಾಪತ್ತೆಯಾದ ದಿನ ತಾನು ಹಾಗೂ ಮಣಿಕಂಠ ಜೊತೆಯಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದ. ಅನುಮಾನದ ಮೇರೆಗೆ ಪೊಲೀಸರೊಂದಿಗೇ ಇದ್ದ ಪಿಕಪ್ ಚಾಲಕ ಮಣಿಕಂಠನನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಮಣಿಕಂಠ, ತನ್ನ ಕಾರನ್ನು ಸ್ನೇಹಿತ ಕೊಂಡೊಯ್ದಿದ್ದ. ಆತನ ಪಿಕ್ ಅಪ್ ವಾಹನದಲ್ಲಿ ತಾನು ಮಲಗಿಕೊಂಡಿದ್ದೆ’ ಎಂದು ತದ್ವಿರುದ್ದ ಮಾಹಿತಿ ನೀಡಿದ್ದಾನೆ.
ಇದರಿಂದ ಅನುಮಾನಗೊಂಡ ಆಗುಂಬೆ ಪೊಲೀಸರು, ಕಳೆದ ಕೆಲ ದಿನಗಳಿಂದ ತಮ್ಮ ಜೊತೆಯಲ್ಲಿಯೇ ಓಡಾಡಿಕೊಂಡಿದ್ದ ಮಣಿಕಂಠನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಆ ಬಳಿಕ ತನಿಖಾಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಪೂಜಾಳ ಹತ್ಯೆಯ ಎಲ್ಲ ವೃತ್ತಾಂತವನ್ನು ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಯಾದ ಪೂಜಾಳಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದ ಆರೋಪಿಯು, ಕಾರೊಂದರಲ್ಲಿ ಆಕೆಯನ್ನು ನಾಲೂರು ಕೊಳಿಗೆ ಗ್ರಾಮದ ಕವಲೇಗುಡ್ಡದ ಬಳಿ ಕರೆದೊಯ್ದಿದ್ದ. ಅಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಕವಲೇಗುಡ್ಡದ ಬೆಟ್ಟದ ಮೇಲಿಂದ ಕೆಳಕ್ಕೆ ಎಸೆದು, ಆತ್ಮಹತ್ಯೆ ಎಂಬಂತೆ ಕಾಣುವಂತಾಗಲು ಪ್ರಯತ್ನಿಸಿದ್ದ. ಈ ಎಲ್ಲ ಸಂಗತಿಯನ್ನು ಪೊಲೀಸರ ತನಿಖೆಯ ವೇಳೆ ಬಾಯ್ಬಿಟ್ಟಿರುವುದಾಗಿ ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಪೂಜಾಳ ವಿವಾಹವು ಯುವಕನೋರ್ವನೊಂದಿಗೆ ನಡೆದಿತ್ತು. ಆದರೆ ಕೌಟುಂಬಿಕ ಕಲಹದ ಕಾರಣದಿಂದಾಗಿ ಪೂಜಾ ತವರು ಮನೆ ಸೇರಿದ್ದಳು. ತದನಂತರ ಸಂಬಂಧಿ ಮಣಿಕಂಠನ ಜೊತೆ ಹೆಚ್ಚಿನ ಒಡನಾಟವಿಟ್ಟುಕೊಂಡಿದ್ದಳು. ಈ ನಡುವೆ ಪೂಜಾಳು ಮತ್ತೋರ್ವ ಯುವಕನೊಂದಿಗೆ ಸಲುಗೆಯಿಂದಿದ್ದಾಳೆ ಎಂಬುದನ್ನು ಆರೋಪಿ ಮಣಿಕಂಠ ಅರಿತುಕೊಂಡಿದ್ದ.
ಪೂಜಾಳ ಹುಟ್ಟುಹಬ್ಬಕ್ಕೆ ಮಣಿಕಂಠ ಕೊಡಿಸಿದ್ದ ಕೇಕ್ ಅನ್ನು ಪೂಜಾಳು, ಆರೋಪಿಯ ಬದಲಾಗಿ ಸಲುಗೆಯಿಂದಿದ್ದ ಯುವಕನೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಇದರಿಂದ ಮಣಿಕಂಠ ಮತ್ತಷ್ಟು ಆಕ್ರೋಶಗೊಂಡಿದ್ದ.
ಆತ, ತಾನು ಆಕೆಗೆ ನೀಡಿದ್ದ 40 ಸಾವಿರ ಹಣ ಕೊಡುವಂತೆ ಮೆಸೇಜ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಎಂದು ಹೇಳಿದ್ದ. ನಂತರ ಆತನೇ ಮೊಬೈಲ್ ಆಫ್ ಮಾಡಿ ನಂತರ ಚಾರ್ಜ್ ಹಾಕಿದ ಹಾಗೆ ಮಾಡಿ ಕೊಲೆ ಮಾಡಿದ ನಂತರ ಮತ್ತೆ ಆಕೆ ಮೊಬೈಲ್‌ಗೆ ದುಡ್ಡು ನೀಡುವಂತೆ ಮೆಸೇಜ್ ಹಾಕಿದ್ದ. ಇದು ಪೊಲೀಸರಿಗೂ ಹಾದಿ ತಪ್ಪುವಂತೆ ಮಾಡಿತ್ತು.
ಆಗುಂಬೆ ಠಾಣೆ ಪಿಎಸ್ಐ ರಂಗನಾಥ್ ಅಂತರಗಟ್ಟಿ ಮತ್ತವರ ಸಿಬ್ಬಂದಿಗಳ ದಕ್ಷ ತನಿಖೆಯಿಂದ ನಿಗೂಢವಾಗಿದ್ದ ಯುವತಿಯ ನಾಪತ್ತೆ ಪ್ರಕರಣ, ಕೊನೆಗೂ ಬಯಲಿಗೆ ಬರುವಂತಾಗಿದೆ. ಪೊಲೀಸರ ಜೊತೆಗೇ ಓಡಾಡಿಕೊಂಡಿದ್ದವನೇ ಕೊಲೆ ಆರೋಪಿ ಎಂಬ ಸತ್ಯಾಂಶ ಹೊರಗೆ ಬಂದಿದ್ದು, ಈಗ ಜೈಲು ಪಾಲಾಗುವಂತಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.