ಶಿವಮೊಗ್ಗ : ಕೇವಲ ರಾಜಧಾನಿ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯಕ್ಕೇ ಅಡಿಪಾಯ ಹಾಕಿದವರು ಕೆಂಪೇಗೌಡರು. ದೂರದೃಷ್ಟಿಯಿಂದ ನಾಡನ್ನು ಕಟ್ಟುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜೂ.27 ರಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ಸಂಸ್ಥಾಪಕರು. ಅತ್ಯಂತ ಮುಂದಾಲೋಚನೆಯಿಂದ ನಗರವನ್ನು ನಿರ್ಮಿಸಿದರು. 16 ನೇ ಶತಮಾನದಲ್ಲೇ ಬೆಂಗಳೂರಿನಲ್ಲಿ ಅನೇಕ ಕೆರೆಗಳು, ಮಾರುಕಟ್ಟೆಗಳನ್ನು ನಿರ್ಮಿಸಿದ್ದರು. ಅನೇಕ ಸಾಮಾಜಿಕ ಪಿಡುಗಗಳ ವಿರುದ್ದ ಕೆಲಸ ಮಾಡಿದ್ದರು. ಬೆಂಗಳೂರು ನಗರ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ರಾಜ್ಯದ ಬೆನ್ನೆಲುಬಾಗಿದೆ. ಕೆಂಪೇಗೌಡರು ನಾಡು ಕಟ್ಟುವಲ್ಲಿ ನಮಗೆಲ್ಲ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಹೇಳಿದರು.
ಶ್ರೀ ಕೆಂಪೇಗೌಡ ಜಯಂತಿ ಅಂಗವಾಗಿ ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್ ಜಿ.ಆದಿಮೂರ್ತಿ, ತಾಲೂಕು ಒಕ್ಕಲಿಗರ ಸಂಘ ಅಧ್ಯಕ್ಷ ಎ ಎಸ್ ಚಂದ್ರಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮೇಶ್, ಸಮಾಜದ ಮುಖಂಡರು ಹಾಜರಿದ್ದರು.