ದಾವಣಗೆರೆ: ಬಿಪಿಎಲ್ ಕಾರ್ಡ್‌ದಾರರಿಗೆ ಜಮೀನು ನೋಂದಾವಣೆಗೆ ಒಂದು ಗುಂಟೆ ಜಾಗ ನಿಗದಿಪಡಿಸಿ, ಮನೆಕಟ್ಟಿಕೊಳ್ಳಲು ತಗಲುವ ವೆಚ್ಚದ ಅರ್ಧದಷ್ಟು ಹಣವನ್ನು ಸರ್ಕಾರ ಪ್ರೊತ್ಸಾಹಧನ ನೀಡಬೇಕು. ಉಳಿದ ಮಧ್ಯಮ ವರ್ಗದ ಜನರಿಗೆ ಎರಡುವರೆ ಗುಂಟೆಯನ್ನು ಜಮೀನು ನೋಂದಾವಣೆಗೆ ನಿಗಧಿ ಪಡಿಸಬೇಕು. ವ್ಯಕ್ತಿಯೊಬ್ಬ ಭೂಮಿ ಖರೀಧಿಸಿ ನೋಂದಾವಣೆ ಮಾಡಿಕೊಳ್ಳಲು ಕನಿಷ್ಟ 5 ಗುಂಟೆ ಜಮೀನು ಇರಬೇಕೆಂಬ ಹಾಲಿ ಸರ್ಕಾರದ ನಿಯಮವನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈಗಿರುವ ನಿಯಮದಂತೆ ಕಡು ಬಡವರು, ಕೆಳ ಮಧ್ಯಮವರ್ಗದವರು 5 ಗುಂಟೆ ಜಮೀನು ಕೊಳ್ಳಲು
ಸಾದ್ಯವಾಗುವುದಿಲ್ಲ. ಆದ್ದರಿಂದ ಬಿಪಿಎಲ್ ದಾರರಿಗೆ ಒಂದು ಗುಂಟೆ, ಮಧ್ಯಮವರ್ಗದವರಿಗೆ ಎರಡುವರೆ ಗುಂಟೆ ಜಮೀನು ನೋಂದಣಿ ಮಾಡಲು ಅವಕಾಶ ಇರುವಂತೆ ಆ ನಿಯಮಕ್ಕೆ ಸರ್ಕಾರ ತಿದ್ದುಪಡಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕೂಡ ಭೂಮಿಗೆ ಹೆಚ್ಚು ಮೌಲ್ಯ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ 5 ಗುಂಟೆ ಜಮೀನು ತೆಗೆದುಕೊಳ್ಳಲು ಜನರಿಗೆ ಸಾಧ್ಯವಾಗುವುದಿಲ್ಲ. ಮಾತ್ರವಲ್ಲದೆ ಅವರಿಗೆ ನಿವೇಶನ, ಮನೆಕಟ್ಟಿಕೊಳ್ಳಲು 5 ಗುಂಟೆ ಜಾಗ ಬೇಕಾಗಿಲ್ಲ. ಅವರಿಗೆ ಒಂದು ಅಥವಾ ಎರಡು ಗುಂಟೆ ಜಾಗ ಸಿಕ್ಕರೆ ಸಾಕು. ಭೂಮಿಯ ಇವತ್ತಿನ ದರಕ್ಕೆ ಒಂದು ಗುಂಟೆ ಖರೀದಿ ಮಾಡಲು ಅವರು ಹರಸಾಹಸ ಪಡಬೇಕಾಗಿದೆ. ಹಾಗಾಗಿ ಹಾಲಿ ಇರುವ 5 ಗುಂಟೆ ಖರೀದಿಯ ಮಾನದಂಡವನ್ನು ರದ್ದುಪಡಿಸಿ, ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಗುಂಟೆ ಜಾಗ ಮತ್ತು ಮನೆ ಕಟ್ಟಿಕೊಳ್ಳಲು ತಗಲುವ ವೆಚ್ಚದ ಅರ್ಧದಷ್ಟು ಪ್ರೊತ್ಸಾಹಧನ ನೀಡಬೇಕು. ಉಳಿದ ಮಧ್ಯಮವರ್ಗದವರಿಗೆ ಎರಡುವರೆ ಗುಂಟೆ ನೋಂದಣಿಗೆ ಅವಕಾಶ ನೀಡಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಕಡುಬಡವರಿಗೆ ನಿವೇಶನಗಳನ್ನು ಉಚಿತವಾಗಿ ನೀಡಬೇಕು. ನೀಡಲು ಸಾಧ್ಯವಿಲ್ಲದ ಕಡೆ ಒಂದು ಗುಂಟೆಗೆ ತಗಲುವ ಅರ್ಧದಷ್ಟು ಹಣವನ್ನು ಸರ್ಕಾರದಿಂದ ಭರಿಸಿದರೆ ಬಡವರು ಶೂರನ್ನು ಕಟ್ಟಿಕೊಂಡು ತಮ್ಮ ಕನಸಿನ ಗೋಪುರವಾದ ಮನೆ ಕಟ್ಟಿಕೊಂಡು ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.