ಬೆಂಗಳೂರು: ಸೂಕ್ತ ಪರವಾನಗಿ ಇಲ್ಲದ ಕಾರಣ ಖಾಸಗಿ ಟಿವಿ ವಾಹಿನಿಯೊಂದರ ಪ್ರಸಾರವನ್ನು ನಿಲ್ಲಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಪವರ್ ಟಿವಿ ತನ್ನ ಪರವಾನಗಿಯನ್ನು 2021ರಿಂದ ನವೀಕರಣ ಮಾಡಿಕೊಂಡಿಲ್ಲ ಎಂದು ಆಪಾದಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ, ಹೈಕೋರ್ಟ್ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಇಂತಹ ಪ್ರಸಾರ ತಡೆಯು ರಾಜಕೀಯ ದ್ವೇಷ ಹೊಂದಿದೆ ಎಂದು ಹೇಳಿದೆ.
ಐಪಿಎಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ ಮತ್ತು ಮಾಜಿ ಎಂಎಲ್‌ಸಿ ಎಚ್.ಎಂ.ರಮೇಶ್ ಗೌಡ ಅವರು ತಮ್ಮ ಪರವಾನಗಿ ಅವಧಿ ಮುಗಿದ ನಂತರವೂ ಚಾನೆಲ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ ನಂತರ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರು ಮಧ್ಯಂತರ ಆದೇಶವನ್ನು ನೀಡಿದ್ದರು.
ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಕುರಿತು ಸಾಲು ಸಾಲು ಸುದ್ದಿ ಪ್ರಸಾರ ಮಾಡಿದ ನಂತರ ಈ ಕ್ರಮವನ್ನು ಕೈಕೊಳ್ಳಲಾಗಿದೆ ಎಂದು ಪವರ್ ಟಿವಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಈ ಕುರಿತು ಮಾತನಾಡಲು ಏಪ್ರಿಲ್ 25 ರಂದು ಪ್ರಜ್ವಲ್ ರೇವಣ್ಣ ಪವರ್ ಟಿವಿ ಸಿಇಒ ರಾಕೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ, ಪ್ರಜ್ವಲ್ ರೇವಣ್ಣ ವಿರುದ್ಧದ ಎಲ್ಲಾ ಪ್ರಸಾರವನ್ನು ಕೈಬಿಟ್ಟರೆ ಚಾನಲ್ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು ಎಂಬುದನ್ನು ಕೋರ್ಟ್ ಮುಂದೆ ಹೇಳಿದ್ದಾರೆ.
ಇದಲ್ಲದೇ ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸುವಂತೆ ಐಎಎಸ್ ಅಧಿಕಾರಿಯೊಬ್ಬರಿಗೆ ಜೆಡಿಎಸ್ ನ ನಾಯಕ ಕರೆ ಮಾಡಿ ಮನಬಂದಂತೆ ಮಾತನಾಡಿದ್ದಾರೆ. ಈ ಕುರಿತು ದೂರು ನೀಡಿದರು ಸಹ ಅಧಿಕಾರಿಗೆ ಒತ್ತಡ ತಂದು ಪ್ರಸಾರ ನಿಲ್ಲಿಸಿದೆ ಎಂದು ಕೋರ್ಟ್ ಮುಂದೆ ಪವರ್ ಟಿವಿ ವಕೀಲರು ವಾದಿಸಿದ್ದಾರೆ.
2023 ರಲ್ಲೇ ನಮ್ಮ ಚಾನೆಲ್‌ಗೆ ಹತ್ತು ವರ್ಷಗಳ ಪರವಾನಗಿ ನವೀಕರಣವನ್ನು ನೀಡಲಾಗಿದೆ ಎಂದು ಪವರ್ ಟಿವಿ ಕೋರ್ಟ್ ನಲ್ಲಿ ಗಮನಸೆಳೆದಿದೆ.
ಪವರ್ ಟಿವಿ ಪರವಾಗಿ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫೆರ್ನಾಂಡಿಸ್ ಮತ್ತು ವಕೀಲರಾದ ಮಿಥು ಜೈನ್ ಮತ್ತು ಸಂಚಿತ್ ಗರ್ಗಾ ಅವರು ವಾದ ಮಂಡಿಸಿದ್ದರು.