ವಾಹನ ನಿಲುಗಡೆಗೆ ಹೊಸ ವ್ಯವಸ್ಥೆ, ಸಾರ್ವಜನಿಕರಿಂದ ಅಪಾರ ಮೆಚ್ಚುಗೆ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ ಅನೇಕ ಕಿರಿ ಕಿರಿ ರಸ್ತೆಗಳ ಹಾಗೆಯೇ ಸವಾರ್ ಲೈನ್ ರಸ್ತೆಯೂ ಒಂದು. ಇಲ್ಲಿ ಜನರು ಬೇಕಾ ಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಇಲ್ಲಿ ಸದಾ ಟ್ರಾಫಿಕ್ ಸಮಸ್ಯೆ. ಆಗಾಗ ವಾಹನಗಳಲ್ಲಿ ಬಂದು ಹೋಗುವವರಿಗೆ ವಿಪರೀತ ಕಿರಿ ಕಿರಿ. ಇದಕ್ಕೀಗ ಟ್ರಾಫಿಕ್ ಪೊಲೀಸರೇ ಪರಿಹಾರ ಕಂಡುಕೊಂಡಿದ್ದಾರೆ. ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ ಇರುವ ಕನ್ಸರ್ ವೆನ್ಸಿ ಸ್ವಚ್ಚಗೊಳಿಸಿ, ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಮೂಲಕ ಪಶ್ವಿಮ ಸಂಚಾರಿ ಪೊಲೀಸರೇ ಪರಿಹಾರ ಕಂಡುಕೊಂಡಿದ್ದಾರೆ.
ಮಂಗಳವಾರ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್‍ಐ ತಿರುಮಲೇಶ್, ಡಿಎಆರ್ ಎಸ್‍ಐ ಪ್ರಕಾಶ್.ಎ.ಆರ್, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಿಹೆಚ್‍ಸಿ ಸಂದೀಪ್, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಿಪಿಸಿ ಪ್ರಕಾಶ್ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಿಪಿಸಿ ಪ್ರಶಾಂತ್ ಅವರು ಶಿವಮೊಗ್ಗ ಸ್ಮಾರ್ಟ್ ಸಿಟಿಯ ಸಹಯೋಗದೊಂದಿಗೆ ಈ ಸ್ಥಳದಲ್ಲಿದ್ದ ಕಸ ಮತ್ತು ಗಿಡಗಂಟಿಗಳನ್ನು ಸ್ವಚ್ಚಗೊಳಿಸಿ, ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಈಗ ಆ ಭಾಗದಲ್ಲಿನ ಜನರ ವಾಹನ ನಿಲುಗಡೆಗೆ ಅನುಕೂಲವಾಗಿದೆ.
ಮಾನಸ ಆಸ್ಪತ್ರೆ ಮತ್ತು ಆ ಕಡೆಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಅಲ್ಲಿ ನಿಲುಗಡೆ ಮಾಡುವುದು. ಇದರಿಂದ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಈ ರಸ್ತೆಯಲ್ಲಿ ಈಗಾಗಲೇ ಬದಲೀ ದಿನಗಳಂದು ಪಾರ್ಕಿಂಗ್ ಮಾಡಲು ಅಧಿಸೂಚನೆಯನ್ನು ಹೊರಡಿಸಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.