ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಹಿನ್ನೆಲೆ
ಭದ್ರಾವತಿ: ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ, ಜೂ.೨೫ ರಂದು ಭದ್ರಾವತಿ ನಗರ ವೃತ್ತದ ಸಿಪಿಐ ಸೈಲ್ ಕುಮಾರ್ ಅವರು ಭದ್ರಾವತಿ ನಗರದ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜು, ಕೋಡಿಹಳ್ಳಿ ಕ್ರಾಸ್, ಭದ್ರಾವತಿ ಮತ್ತು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತಂತೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೆಳಕಂಡ ಮಾಹಿತಿಯನ್ನು ನೀಡಿದರು.
ವ್ಯಕ್ತಿ ಯಾವ ವಸ್ತುವನ್ನು ಸೇವನೆ ಮಾಡಿದಾಗ ಆತನಿಗೆ ಅಮಲು ತರಿಸುತ್ತದೋ ಅಂತಹಾ ವಸ್ತುಗಳನ್ನು ಮಾದಕ ವಸ್ತುಗಳು ಎಂದು ಕರೆಯುತ್ತೇವೆ. ಮಾದಕ ವಸ್ತುವಿನಲ್ಲಿ ಪ್ರಮುಖವಾಗಿ ಎರಡು ಬಗೆ ಇದ್ದು,ನೈಸರ್ಗಿಕವಾದ ಗಾಂಜಾ, ಕೆನಬಿಸ್, ಮರಿಜುವಾನ ಮತ್ತು ಸಿಂಥೆಟಿಕ್ ಉತ್ಪನ್ನಗಳಾದ ಚರಸ್, ಅಶಿಸ್, ಓಪಿಯಂ, ಎಲ್.ಎಸ್.ಡಿ, ಕೊಕೇನ್ ಗಳಾಗಿರುತ್ತವೆ. ಇವುಗಳನ್ನು ಯಾವುದೇ ರೂಪದಲ್ಲಾದರೂ ಸೇವನೆ ಮಾಡಿದರೆ ಅದು ವ್ಯಸನಿಗೆ ತಾತ್ಕಾಲಿಕ ಉತ್ತೇಜನ ಅಥವಾ ಅಮಲನ್ನು ತರಿಸುತ್ತವೆ ಎಂದು ಹೇಳಿದರು.
ಮಾದಕ ವಸ್ತುವಿನ ವ್ಯಸನಕ್ಕೆ ಹೆಚ್ಚಾಗಿ ಯುವಕರೇ ತುತ್ತಾಗುತ್ತಿದ್ದು, ಮೊದಲು ಮೋಜಿಗೆಂದು ಶುರು ಮಾಡುವ ಹವ್ಯಾಸಗಳು ನಂತರ ಚಟಗಳಾಗಿ ಬದಲಾಗಿ, ಮಾದಕ ವಸ್ತುವನ್ನು ನಿರಂತರವಾಗಿ ಸೇವನೆ ಮಾಡಲು, ಯಾವುದೇ ಹಂತಕ್ಕೆ ಬೇಕಾದರೂ ತಲುಪಿ ಪಡೆದುಕೊಳ್ಳಬೇಕೆಂಬ ಕೆಟ್ಟ ಆಲೋಚನೆ ತರಿಸುತ್ತವೆ ಎಂದು ತಿಳಿಸಿದರು.
ಮಾದಕ ದ್ರವ್ಯ ಸೇವನೆ ಮಾಡುವ ವ್ಯಕ್ತಿಯು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ತುತ್ತಾಗಿ, ಮುಂದೆ ಪ್ರಾಣಾಪಾಯವಾಗುವ ಸಂಭವವೂ ಸಹಾ ಹೆಚ್ಚಿರುತ್ತದೆ. ಮಾದಕ ದ್ರವ್ಯದಿಂದ ದುಷ್ಪರಿಣಾಮಗಳು ಕಟ್ಟಿಟ್ಟ ಬುತ್ತಿಯಂತಿರುತ್ತದೆ. ಮಾದಕ ದ್ರವ್ಯದ ವ್ಯಸನಿಗಳು ತಾವು ಮಾಡುತ್ತಿರುವ ಕೃತ್ಯದ ಅರಿವು ಇಲ್ಲದೇ, ಅದರ ಪರಿಣಾಮದ ಬಗ್ಗೆ ಮುಂದಾಲೋಚನೆ ಇಲ್ಲದೇ ಕೇವಲ ಕಾಲ್ಪನಿಕ ಪ್ರಪಂಚದಲ್ಲಿ ಇರುತ್ತಾರೆ. ಇಂತಹವರಿಂದ ಸಮಾಜಕ್ಕೆ ಅಪಾಯವೇ ಹೆಚ್ಚು ಹಾಗೂ ಇವರ ಅವಲಂಬಿತರು, ಕುಟುಂಬಸ್ಥರು ಸಮಾಜದಿಂದ ಕಡಗಣನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಮಾದಕ ದ್ರವ್ಯದ ವ್ಯಸನದಿಂದ ಆ ವ್ಯಕ್ತಿಯ ಕೌಟುಂಬಿಕ ಜೀವನದ ಮೇಲೆ ನೇರ ಪರಿಣಾಮ ಬೀರಲಿದ್ದು, ಆರ್ಥಿಕವಾಗಿಯೂ ಸಹಾ ಕುಟುಂಬವು ತೊಂದರೆ ಅನುಭವಿಸುವಂತಾಗುತ್ತದೆ ಹಾಗೂ ಮಾದಕ ದ್ರವ್ಯದ ಮುಂದೆ ಬೇರೆ ಯಾವುದೇ ಸಂಬಂಧಕ್ಕೆ ಬೆಲೆ ನೀಡದೇ ಮಾನವೀಯ ಮೌಲ್ಯಗಳನ್ನು ಕಳೆದು ಕೊಂಡು ಮೃಗದಂತೆ ವರ್ತಿಸುತ್ತಾರೆ. ಮಾದಕ ದ್ರವ್ಯವೆಂಬುದು ವಿಶ ವತೃಲವಿದ್ದಂತೆ, ಮಾದಕ ದ್ರವ್ಯದ ಸುಳಿಗೆ ಹೋಗುವುದು ಎಷ್ಟು ಸುಲಭವೋ, ಅದರಿಂದ ಹೊರಬರುವುದು ಅಷ್ಟೇ ಕಠಿಣ, ಶಿವಮೊಗ್ಗ ಜಿಲ್ಲಾ ಇಲಾಖೆಯು ಮಾದಕ ದ್ರವ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಮಾದಕ ವಸ್ತುಗಳ ಸಾಗಾಣಿಕೆ, ಸೇವನೆ, ಮಾರಾಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ನಿಮಗೂ ಸಹಾ ಮಾದಕ ವಸ್ತು ಸಾಗಾಟ, ಮಾರಾಟ, ಸಂಗ್ರಹಣೆ ಮತ್ತು ಬೆಳೆಯುತ್ತಿರುವ ಬಗ್ಗೆ ಮಾಹಿತಿ ಇದ್ದಲ್ಲಿ, ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜು, ಕೋಡಿಹಳ್ಳಿ ಕ್ರಾಸ್, ಭದ್ರಾವತಿಯ ಪ್ರಾಂಶುಪಾಲರಾದ ಶ್ರೀನಿವಾಸ್ ಮತ್ತು ಪ್ರಾಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಹಾಗೂ ಭದ್ರಾವತಿ ಟೌನ್ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ್, ಪ್ರಾಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.