ಮಂಗಳೂರು: ಕರಾವಳಿಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಂಪೌಂಡ್ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಇಂದು ಸಂಭವಿಸಿದೆ.
ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಪಕ್ಕದ ಮನೆಯ ಗೋಡೆ ಕುಸಿದು ದುರ್ಘಟನೆ ನಡೆದಿದೆ.
ರಾತ್ರಿಯಿಡೀ ಮಳೆ ಸುರಿದಿದ್ದು ಕಂಪೌಂಡ್ ವಾಲ್ ಹಾಗೂ ಅಡಿಕೆ ಮರಗಳು ಯಾಸಿರ್ ಅವರ ಮನೆಯ ಮೇಲೆ ಕುಸಿದು ಬಿದ್ದಿವೆ.
6 ವರ್ಷ ಗಳ ಹಿಂದೆ ಈ ಮನೆಯನ್ನು ಖರೀದಿಸಿ ಲೀಸ್ ಗೆ ನೀಡಿದ್ದರು. ಇದೀಗ 6 ತಿಂಗಳ ಹಿಂದೆಯಷ್ಟೇ ಮನೆಗೆ ವಾಪಸ್ ಆಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿತ್ತು. ಆದರೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಇದೀಗ ನಾಲ್ವರ ಪ್ರಾಣ ಹೊರಟು ಹೋಗಿದೆ.
ಅವಶೇಷಗಳಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರ ತೆಗೆಯಲು ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿಯ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿದರು.