ಶಿವಮೊಗ್ಗ: ವಿಜಯ ದಶಮಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್ ) ವತಿಯಿಂದ ಪಥಸಂಚಲನ ನಡೆಸಲಾಯಿತು. ಸುರಿಯುತ್ತಿದ್ದ ಮಳೆಯ ನಡುವೆ ಗಣವೇಷಧಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಆರ್‌ಎಸ್‌ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗ ಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿಜಯ ದಶಮಿ ಅಂಗವಾಗಿ ಪ್ರತಿವರ್ಷದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಾರ್ಷಿಕ ಪಥ ಸಂಚಲನ ನಡೆಸಲಾಯಿತು. ಶಿವಮೊಗ್ಗದ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘ ಪಕ್ಕದ ತಾನಾಜಿ ಸಂಘದಿಂದ ಆರಂಭವಾದ ಪಥ ಸಂಚಲನ, ಗಾಂಧಿ ಬಜಾರ್, ಅಶೋಕ ರಸ್ತೆ, ಬಿ.ಹೆಚ್.ರಸ್ತೆ ಮೂಲಕ ಮೈಲಾರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಿ ಬಂತು.
ಪಥಸಂಚಲದ ಬಳಿಕ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ವಿಭಾಗ ಸಹಕಾರ್ಯವಾಹ ಎಂ.ಪಿ. ಮಧುಕರ ಮತ್ತೂರು ಮಾತನಾಡಿ, ಹಿಂದು ಧರ್ಮಕ್ಕೆ ಧಕ್ಕೆ ಬಂದಾಗಲೆಲ್ಲ ಹೋರಾಟ ನಡೆಸಲಾಗಿದೆ. ಈಗಲೂ ಅದೇ ಮಾದರಿಯ ಹೋರಾಟದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬೌದ್ಧಿಕ್ ನೀಡಿದ ಅವರು, ಸಜ್ಜನರು ಯಾವತ್ತೂ ಸಂಘಟಿತರಾಗದೆ ಬೇರೆಯಿದ್ದು ಚಿಂತನೆ ಮಾಡುತ್ತಾರೆ. ಆದರೆ ದುರ್ಜನರು ಬೇಗ ಒಂದಾಗಿ ಇನ್ನೊಬ್ಬರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ಬಗ್ಗೆ ಸೂಕ್ಷ್ಮ ಸಂವೇ ದನೆ ಅವಶ್ಯ ಎಂಬುದನ್ನು ಸರಸಂಘಚಾಲಕರು ತಿಳಿಸಿದ್ದಾರೆ ಎಂದು ಹೇಳಿದರು.
ವಿಜಯದಶಮಿಯಂದು ಆರ್‌ಎಸ್‌ಎಸ್‌ನ ಕೇಂದ್ರ ಸ್ಥಾನ ನಾಗಪುರದಲ್ಲಿ ಏರ್ಪಡಿಸಿದ್ದ ಬೌದ್ಧಿಕ್‌ನಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಚರ್ಚಿಸಿದ ಸಂಗತಿಗಳ ಬಗ್ಗೆ ಪ್ರತಿಯೊಬ್ಬರೂ ಅವಲೋಕಿಸಬೇಕಾದ ಅಗತ್ಯವಿದೆ ಎಂದರು.
ಮುಖ್ಯವಾಗಿ ಸಂಸ್ಕಾರ ಕ್ಷೀಣವಾಗುತ್ತಿದೆ. ಮಕ್ಕಳು ಮೊಬೈಲ್ ಬಳಸುವುದು ಹೆಚ್ಚುತ್ತಿದೆ. ಹೆಣ್ಣಿಗೆ ಮಾತೃ ಸ್ಥಾನ ನೀಡಿರುವ ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಕಳವಳಕಾರಿ. ಶಿಕ್ಷಣದ ವ್ಯವಸ್ಥೆಯಲ್ಲಿ ಸಂಸ್ಕಾರ ಹೇಳಿಕೊಡಬೇಕಿದೆ ಎಂದರು.