ಜಿಲ್ಲಾ ಉಸ್ತುವಾರಿ ಸಚಿವ ಆಡಳಿತ ನಿರ್ಲಕ್ಷ್ಯ- ಆರೋಪ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಆಡಳಿತ ನಿರ್ಲಕ್ಷ್ಯ ಖಂಡಿಸಿ ನ. ೧ರಂದು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಹೇಳಿದರು
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮಧು ಬಂಗಾರಪ್ಪ ಅವರು ದಿವ್ಯ ನಿರ್ಲಕ್ಷ್ಯ ಹೊಂದಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಉದಾಹರಣೆಗೆ ಡಿಬಿ ಹಳ್ಳಿ ಗ್ರಾಮದ ರೈತರು ಹಕ್ಕುಪತ್ರಕ್ಕಾಗಿ ೨೦ ದಿನಗಳು ಹಗಲು ರಾತ್ರಿ ಸತ್ಯಾಗ್ರಹ ನಡೆಸಿದರೂ ಅಲ್ಲೇ ಇದ್ದರೂ ಸೌಜನ್ಯಕ್ಕಾಗಿಯಾದರೂ ಒಮ್ಮೆಯಾದರೂ ಮಾತನಾಡಿಸಲಿಲ್ಲ. ದುರಹಂಕಾರದಿಂದ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಮುಳುಗಡೆ ಸಂತ್ರಸ್ತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟರೆ ಒಮ್ಮೆಯೂ ವಿಧಾನಸಭೆಯಲ್ಲಿ ಮಾತನಾಡಿಲ್ಲ. ಇಂತಹ ಸಚಿವರ ನಡವಳಿಕೆಯನ್ನು ನಾವು ಖಂಡಿಸುತ್ತೇವೆ. ಅಲ್ಲದೇ, ನ. ೧ರಂದು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಅ. ೨೬ರಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಜಯಂತಿ ಇದ್ದು ಸೊರಬದ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಿತಿಯಿಂದ ಪುಷ್ಪಾರ್ಷನೆ ಸಲ್ಲಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್, ಅಜಿತ್, ಕಾಂತೇಶ್, ವೀರೇಶ್, ಪತ್ರೇಶ್, ತಿಮ್ಮಣ್ಣ, ರಾಜ ಸ್ವಾಮಿ ಇದ್ದರು.