ಪತ್ರಿಕಾಗೋಷ್ಟಿಯಲ್ಲಿ ಆರ್.ಆರ್.ಯು. ಕ್ಯಾಂಪಸ್ ನಿರ್ದೆಶಕ ಡಾ.ರಮಾನಂದ್ ಗರ್ಗೆ ಮಾಹಿತಿ
ಶಿವಮೊಗ್ಗ: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ(ಆರ್.ಆರ್.ಯು )ವು ನಗರದ ರಾಗಿಗುಡ್ಡದಲ್ಲಿ ಕಳೆದ ವರ್ಷದಿಂದ ಆರಂಭವಾಗಿದ್ದು, ಇಲ್ಲಿ ಕೇಂದ್ರ ಸರ್ಕಾರ, ಪೊಲೀಸ್ ಹಾಗೂ ರಾಷ್ಟ್ರೀಯ ಭದ್ರತೆಯ ವಿಷಯವನ್ನಿಟ್ಟುಕೊಂಡು ಹಲವು ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ ಎಂದು ಕ್ಯಾಂಪಸ್ ನಿರ್ದೇಶಕ ಡಾ. ರಮಾನಂದ್ ಗರ್ಗೆ ಹೇಳಿದರು.
ಅವರು ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವಿಶ್ವವಿದ್ಯಾಲಯವು ಭಾರತ ಸರಕಾಋದ ಗೃಹ ವ್ಯವಹಾರಗಳ ಸಚಿವಾಲಯದ ಪ್ರಯೋಜಕತ್ವವನ್ನು ಹೊಂದಿದ್ದು ದೇಶದ ನಾಲ್ಕು ಭಾಗಗಳಲ್ಲಿ ಮಾತ್ರ ಇದನ್ನು ಪ್ರಾರಂಭಿಸಲಾಗಿದ್ದು, ಶಿವಮೊಗ್ಗವೂ ಕೂಡ ಆಯ್ಕೆಯಾಗಿರುವುದು ಹೆಮ್ಮೆಯಾಗಿದೆ. ನಮ್ಮ ವಿವಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಣೆಯಾಗಿದೆ. ಇದನ್ನು ನಗರದಲ್ಲಿ ಪ್ರಾರಂಭಿಸಿ ಒಂದು ವರ್ಷದಲ್ಲಿಯೇ ಕ್ಯಾಂಪಸ್ ಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಿಂದ ಮೆಚ್ಚಿಗೆ ಮಹಾಪೂರವೇ ಹರಿದು ಬಂದಿದೆ. ಭದ್ರತಾ ನಿರ್ವಹಣೆ ಮತ್ತು ಸ್ನಾತಕೋತ್ತರ ಪದವಿ ಕ್ಷೇತ್ರದಲ್ಲಿ ಆರ್.ಆರ್.ಯು. ಮೊದಲ ಬ್ಯಾಚ್ ಆಗಿದೆ. ಪೊಲೀಸ್ ವಿಜ್ಞಾನ ಮತ್ತು ನಿರ್ವಹಣೆಯಲ್ಲಿ ಪದವಿ ಡಿಪ್ಲೊಮಾ ಮಾಡಲು ಶಿವಮೊಗ್ಗವು ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಸೆಕ್ಯೂರಿಟಿ ಮ್ಯಾನೇಜ್ ಮೆಂಟ್ ನಲ್ಲಿ ಪದವಿಯು 4 ವರ್ಷಗಳ ಅವಧಿಯಾಗಿದ್ದು ದ್ವಿತೀಯ ಪಿಯುಸಿ ಪಾಸಾದ ಯಾವುದೇ ವಿದ್ಯಾರ್ಥಿ ಇದರ ಪ್ರವೇಶಕ್ಕೆ ಅರ್ಹತೆಯನ್ನು ಹೊಂದಿದ್ದು ಇದರಲ್ಲಿ ಕ್ರಿಮಿನಲ್ ಜಸ್ಟಿಸ್ ಸಿಸ್ಟಂ, ಕಾರ್ಪೊರೇಟ್ ಸೆಕ್ಯೂರಿಟಿ, ಕಮ್ಯುನಿಟಿ ಪಾಲಿಸಿಂಗ್, ಇಂಟರ್ ನೆಟ್ ಸೆಕ್ಯೂರಿಟಿ ಮುಂತಾದ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದಾಗಿದೆ. ಇನ್ನೊಂದು 4 ವರ್ಷಗಳ ಅವಧಿಯ ಬಿಎ/ಬಿಎಸ್ಸಿ ಡಿಫೆನ್ಸ್ ಆಂಡ್ ಸ್ಟ್ರಾಟೆಜಿಕ್ ಸ್ಟಡೀಸ್ ಎಂಬ ಪದವಿಯಿದ್ದು ಇದು ಕೂಡ 4 ವರ್ಷ ಅವಧಿಯ ಕೋರ್ಸ್ ಆಗಿದೆ ಎಂದರು.
ಇನ್ನು ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ 2 ವರ್ಷ ಅವಧಿಯ 3 ಕೋರ್ಸ್ ಗಳಿದ್ದು ಅವು 2 ವರ್ಷಗಳ ಅವಧಿಯನ್ನು ಹೊಂದಿವೆ. ಮಾಸ್ಟರ್ ಆಪ್ ಆರ್ಟ್ಸ್/ಮಾಸ್ಟರ್ ಆಪ್ ಸೈನ್ಸ್ ಇನ್ ಕ್ರಿಮಿನಾಲಾಜಿ, ಇನ್ನೊಂದು ಮಾಸ್ಟರ್ ಆಫ್ ಆರ್ಟ್ಸ್ ಸೈನ್ಸ್ ಇನ್ ಡಿಫೆನ್ಸ್ ಆಂಡ್ ಸ್ಟ್ರಾಟೆಜಿಕ್ ಸ್ಟಡೀಸ್ ಎಂಬೆರಡು ಸ್ನಾತಕೊತ್ತರ ಪದವಿಗಳಿಗೆ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕಿದ್ದು, ಇಲ್ಲಿ ಪೆನೊಲಾಜಿ, ವಿಕ್ಟಿಮೊಲಾಜಿ, ಸೈಬರ್ ಕ್ರೈಮ್, ಸೈನ್ಸ್ ಆಫ್ ಕ್ರೈಂ, ನ್ಯಾಷನಲ್ ಸೆಕ್ಯೂರಿಟಿ ಆಫ್ ಇಂಡಿಯಾ, ಡಿಫೆನ್ಸ್ ಜನರ್ಲಿಸಂ ಎಂಬ ಮುಂತಾದ ಕೋರ್ಸ್ ಗಳಿವೆ. ಎಂ.ಎಸ್ಸಿ ಕ್ಲಿನಿಕಲ್ ಸೈಕೋಲಾಜಿ ಎಂಬ ಸ್ನಾತಕೊತ್ತರ ಪದವಿಯಲ್ಲಿ ಸೈಕೋಲಾಜಿ, ಜನರಲ್ ಸೈಕೋಲಾಜಿ, ಸೈಕೋಲಾಜಿ ಅಸೆಸ್ಮೆಂಟ್ಸ್, ಕೌನ್ಸಿಲಿಂಗ್ ಎಂಬ ಕೋರ್ಸ್ ಗಳಿವೆ ಎಂದು ಮಾಹಿತಿ ನೀಡಿದರು.
ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ ಇನ್ ಪೊಲೀಸ್ ಸೈನ್ಸ್ ಆಂಡ್ ಮ್ಯಾನೇಜ್ ಮೆಂಟ್ ಎಂಬ 1 ವರ್ಷದ ಸ್ನಾತಕೊತ್ತರ ಪದವಿಯಲ್ಲಿ ಪಂಡಮೆಂಟಲ್ಸ್ ಆಫ್ ಲಾ, ಕ್ರಿಮಿನೊಲಾಜಿ ಆಂಡ್ ವಿಕ್ಟಿಮೊಲಾಜಿ ಎಂಬ ಕೋರ್ಸ್ ಗಳಿವೆ. ಯುವ ಕಾರ್ಯತಂತ್ರದ ಮನಸುಗಳನ್ನು ರೂಪಿಸುವ ಭದ್ರತಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಗುಣಾತ್ಮಕ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದ್ದು, ಪ್ರಸ್ತುತ ಕೋರ್ಸ್ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕ್ಲಿನಿಕಲ್ ಸೈಕಾಲಜಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ರಕ್ಷಣಾ ಕಾರ್ಯತಂತ್ರದ ಅಧ್ಯಯನಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸುತ್ತಿದೆ ಎಂದರು.
ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದ್ದು, ಕೋರ್ಸ್ಗಳು ಸೇವಾ ವೃತ್ತಿಪರರಿಗೆ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಸಮಗ್ರ ಭದ್ರತಾ ಗುಣಾತ್ಮಕವಾಗಿ ಕೊಡುಗೆ ನೀಡಲು ಸಕ್ರಿಯಗೊಳಿಸುತ್ತದೆ. ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳ ಕುರಿತು ಮೂರು ದಿನಗಳ ತರಬೇತಿಯನ್ನೂ ಕೂಡ ಪ್ರಾರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಪೊಲೀಸ್ ಅಧಿಕಾರಿಗಳಿಗೆ ಪರಿವರ್ತನಾ ಸುಧಾರಣೆಗಳು, ಹೊಸದಾಗಿ ಜಾರಿಗೊಳಿಸಲಾದ ಕ್ರಿಮಿನಲ್ ಕಾನೂನುಗಳ ಅವಲೋಕನ ಎಂಬ ತರಬೇತಿ ಕಾರ್ಯಕ್ರಮವನ್ನು ಜು. 22, 23, 24 ರಂದು ಹಮ್ಮಿಕೊಂಡಿದ್ದು, ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಜ್ಞ ಅಧ್ಯಾಪಕ ಡಾ. ನಂದಕುಮಾರ್ ಪೂಜಾಮ್ ಎಸ್., ಡಾ. ಕಾವೇರಿ ಟಂಡನ್, ಡಾ. ಶಿವಲಿಂಗಪ್ಪ ಅಂಗಡಿ, ಚಂದ್ರಶೇಖರ್, ರಂಗಪ್ಪ, ಹರ್ಷಿತಾ ಮಿಶ್ರಾ, ಡಾ. ಕಾವೇರಿ ಉಪಸ್ಥಿತರಿದ್ದರು.