ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಮೈಸೂರು ತಲುಪುವ ಮುನ್ನವೇ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆಯಿತು.
ಕೆಂಗೇರಿ ಬಳಿ ಪ್ರತಿಭಟನಾ ರ್‍ಯಾಲಿ ನಂತರ ಕಾರುಗಳ ಮೂಲಕ ಮೈಸೂರು ಕಡೆ ಹೊರಟ ಬಿಜೆಪಿ ನಾಯಕರು ಕಣ್ ಮಿಣಕೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್ ಹೈವೇ ರೋಡ್ ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದರು. ಇಡೀ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿ ಸಂಪೂರ್ಣ ರಸ್ತೆಯನ್ನು ಬ್ಲಾಕ್ ಮಾಡಲಾಯಿತು. ಇದರಂದಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತವಾಯಿತು. ಕೂಡಲೇ ಅಲ್ಲಿಗೆ ಬಂದ ಪೊಲೀಸರು, ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರೆಲ್ಲನ್ನೂ ವಶಕ್ಕೆ ಪಡೆದುಕೊಂಡು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಸರ್ಕಾರದ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸ್ಥಳ ಬದಲಾವಣೆ ಮಾಡಿ ನಾಯಂಡಹಳ್ಳಿ ಬದಲು ಮೈಸೂರು ರಸ್ತೆ ಕದಂಬ ಹೋಟೆಲ್ ಹತ್ತಿರದಲ್ಲೇ ಪ್ರತಿಭಟನಾ ರ‍್ಯಾಲಿ ನಡೆಸಿ ಆನಂತರ ಮೈಸೂರಿಗೆ ಕಾರುಗಳ ಮೂಲಕ ತೆರಳಲು ನಿರ್ಧರಿಸಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು. ಈ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ಮೈಸೂರು ಚಲೋ ತಡೆಯಬೇಡಿ. ರಾಜ್ಯದಲ್ಲಿ ಬೆಂಕಿ ಬೀಳುತ್ತದೆ. ಸರ್ಕಾರದ ಪಾಪದ ಕೊಡ ತುಂಬಿದೆ. ಕರ್ನಾಟಕದಿಂದ ರಾಹುಲ್ ಗಾಂಧಿಗೆ ಹಣ ಹೋಗುತ್ತಿದೆ. ನಮ್ಮ ರಾಜ್ಯ ಅವರಿಗೆ ಎಟಿಎಂ ಆಗಿದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅದಕ್ಕೆ ಮೊದಲು ಸಿಬಿಐಗೆ ಪ್ರಕರಣ ವಹಿಸಬೇಕು ಎಂದು ಆಗ್ರಹಿಸಿದರು.