ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ, ಬಾಡೂಟಕ್ಕೆ ಜನರು ಮುಗಿಬಿದ್ದಿದ್ದು, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನೆಲಮಂಗಲದ ಹೊರವಲಯದಲ್ಲಿ ಅಭಿನಂದನಾ ಸಮಾರಂಭದಲ್ಲಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬಾಡೂಟದ ಜೊತೆಗೆ ಮದ್ಯವನ್ನೂ ಕೂಡ ನೀಡಲಾಗಿತ್ತು. ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ, ಬಿಯರ್, ಗಟ್ಟಿ ಮದ್ಯದ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿಕೆ ಬಾಬಾ ಅವರು ಮದ್ಯ ಪೂರೈಸಲು ಪರವಾನಗಿ ನೀಡದಂತೆ ಅಬಕಾರಿ ಇಲಾಖೆಗೆ ಸೂಚಿಸಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಶಾಸಕ ನಾಗರಾಜು, ಜೆಡಿಎಸ್‌ನ ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ ಕೂಡ ಭಾಗವಹಿಸಿದ್ದು ಕಂಡು ಬಂದಿತ್ತು.
ಮದ್ಯ ವಿತರಣೆ ಬಗ್ಗೆ ನನಗೆ ತಿಳಿದಿಲ್ಲ. ಇಂತಹದ್ದನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ. ಕಾರ್ಯಕ್ರದಲ್ಲಿ ಭಾಗವಹಿಸಿದ್ದವರು ಎಲ್ಲೋ ಮದ್ಯವನ್ನು ಖರೀದಿಸಿದ್ದು, ಅದನ್ನು ಸ್ಥಳಕ್ಕೆ ತಂದಿರಬಹುದು ಎಂದು ಸುಧಾಕರ್ ಹೇಳಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸುಧಾಕರ್ ಅವರನ್ನು ಟೀಕಿಸಿದ್ದಾರೆ.