ಶಿವಮೊಗ್ಗಃ ರೈತ ಈ ದೇಶದ ಬೆನ್ನೆಲುಬು ಎಂಬುದು ಕೇವಲ ಘೋಷಣೆ ಮಾತ್ರ. ವಾಸ್ತವವಾಗಿ ನಮ್ಮನ್ನಾಳುವ ಮಂದಿ ಈ ರೈತನ ಬೆನ್ನೆಲುಬನ್ನೇ ಮುರಿಯುವ ಹುನ್ನಾರ ನಡೆಸುತ್ತಿರುವುದು ತೀರಾ ಆಘಾತಕಾರಿ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಬಹುಮುಖಿ ವತಿಯಿಂದ 38ನೇ ಕಾರ್ಯಕ್ರಮವಾಗಿ, ನ್ಯಾಷನಲ್ ಕಾಲೇಜು ಆವರಣದ ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಪ್ರಸ್ತುತ ತಲ್ಲಣಗಳು ಕುರಿತು ಮಾತನಾಡಿದ ಅವರು, ನಮ್ಮ ಈ ಆಡಳಿತ ವ್ಯವಸ್ಥೆಗೆ ರೈತ ಹಾಗೂ ಕೃಷಿ ಬವಣೆಗಳೇ ಅರ್ಥ ಆಗಿಲ್ಲ. ಇವರಿಗೆ ರೈತ ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯನ್ನು ಕೊಡಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಾಸ್ತವವಾಗಿ ರೈತ ಸಾಲಗಾರನಾಗಲು ಸಾಧ್ಯವೇ ಇಲ್ಲ. ಆದರೆ, ನಮ್ಮ ವ್ಯವಸ್ಥೆ ರೈತನನ್ನು ಸಾಲಗಾರನನ್ನಾಗಿ ಮಾಡಿದೆ ಎಂದು ವಿವರಿಸಿದ ಅವರು, ರೈತನ ಬೆಳೆಗೆ ವೈeನಿಕ ಬೆಂಬಲ ಬೆಲೆ, ಬೆಳೆಗಳ ಸಾಗಾಣಿಕೆ ವ್ಯವಸ್ಥೆ, ಬೆಳೆಯನ್ನು ರಕ್ಷಿಸಲು ಶೀಥಲೀಕರಣ ಕೇಂದ್ರಗಳ ಸ್ಥಾಪನೆಯಷ್ಟೇ ನಮ್ಮ ಬಹುಕಾಲದ ಬೇಡಿಕೆ ಎಂದ ಅವರು, ಇದನ್ನು ಈಡೇರಿಸುವ ಸೌಜನ್ಯ ಕೂಡಾ ನಮ್ಮ ಸರ್ಕಾರಗಳಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೈತ ಚಳುವಳಿ ರೂಪುಗೊಳ್ಳಲು ಶಿವಮೊಗ್ಗ ಕೇಂದ್ರ ಬಿಂದು. ರೈತ ಚಳುವಳಿ ಆಷ್ಟೇ ಅಲ್ಲ, ಕಾಗೋಡು ಚಳುವಳಿ, ದಲಿತ ಚಳುವಳಿಗಳು ಆರಂಭವಾದದ್ದೇ ಈ ನೆಲದಿಂದ ಎಂದು ವಿವರಿಸಿದ ಅವರು, ಶಿವಮೊಗ್ಗದಲ್ಲಿ ಸಕ್ಕರೆ ಕಾರ್ಖಾನೆ ಧೋರಣೆಯ ವಿರುದ್ಧ ಹೋರಾಟ ಮಾಡುವ ಸಲುವಾಗಿ ಕಬ್ಬು ಬೆಳೆಗಾರರ ಸಂಘ ಕಟ್ಟಿ ಹೋರಾಟ ಮಾಡಿ, ನಂತರ ರುದ್ರಪ್ಪನವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿ, ಮುಂದೆ ಸುಂದರೇಶ್ ಹಾಗೂ ನಂಜುಂಡಸ್ವಾಮಿ ಹಾಗೂ ಕಡಿದಾಳ್ ಶಾಮಣ್ಣ ಮುಂತಾದವರ ನಾಯಕತ್ವದಲ್ಲಿ ರೈತರು 1980 ಅಕ್ಟೋಬರ್ 2ರಂದು ಶಿವಮೊಗ್ಗದಲ್ಲಿ 25000 ಜನ ಸೇರಿ ಜೈಲು ಬರೋ ಚಳುವಳಿ ಕೈಗೊಂಡು ದೊಡ್ಡ ಹೋರಾಟವನ್ನು ಕೈ ಗೊಳ್ಳಲಾಯಿತು ಎಂದು ರೈತ ಚಳುವಳಿ ಬೆಳೆದು ಬಂದ ದಾರಿಯನ್ನು ಸ್ಮರಿಸಿದರು.
ರೈತ ಹೋರಾಟದ -ಲವಾಗಿ, ಮುಂದೆ ಸರ್ಕಾರ ರೈತರ ಜಮೀನುಗಳ ಪಂಪ್ ಸೆಟ್‌ಗಳಿಗೆ ವಿದ್ಯುತ್ ಬಿಲ್ ತೆಗೆಯಲಾಯಿತು. ಆಗ ನಡೆದ ದಲಿತ ರೈತ ಮತ್ತು ಭಾಷಾ ಚಳುವಳಿಗಳಿಂದಾಗಿ 33ವರ್ಷಗಳಿಂದ ಇದ್ದ ಕಾಂಗ್ರೆಸ್ ಸರ್ಕಾರ ಬದಲಾಗಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬಂತು ಎಂದ ಅವರು, ಇಂದು ರೈತರು ವರ್ಷವೊಂದಕ್ಕೆ 30 ಲಕ್ಷ ಕೋಟಿ ರೂಪಾಯಿ ಭೂಮಿಗೆ ಬಂಡವಾಳ ಹಾಕುತ್ತಾರೆ. ಪಂಪ್ ಸೆಟ್ ಗೆ 10ಲಕ್ಷ ಕೋಟಿ ಬಂಡವಾಳ ಹಾಕುತ್ತಾರೆ ಎಂದು ಅಂಕಿ ಅಂಶ ನೀಡಿದರು.
ಕೃಷಿ ಕ್ಷೇತ್ರದಲ್ಲಿ ಶೇ. 66 ಉದ್ಯೋಗಾವಕಾಶವಿದ್ದರೆ, ಕೈಗಾರಿಕಾ ಕ್ಷೇತ್ರದಲ್ಲಿ ಕೇವಲ ಶೇ. 26 ಮಾತ್ರ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಆದರೂ ಕೂಡಾ ಕೃಷಿ ಉದ್ಯೋಗ ಲಾಭದಾಯಕವಾಗಿಲ್ಲ. ಇದಕ್ಕೆ ಸರ್ಕಾರದ ಧೋರಣೆಗಳೇ ಕಾರಣ ಎಂದ ಅವರು, ರೈತ ಬೆಳೆದ ತರಕಾರಿ ಹಣ್ಣುಗಳನ್ನು ರಸ್ತೆಯಲ್ಲಿ ಹಾಕಿ ಮಾರಲಾಗುತ್ತದೆ. ಆದರೆ ಕಾರ್ಖಾನೆ ಉತ್ಪಾದಿಸಿದ ಚಪ್ಪಲಿಗಳನ್ನು ಎ.ಸಿ.ರೂಂನಲ್ಲಿ ಮಾರಲಾಗುತ್ತದೆ. ಇದು ವರ್ತಮಾನದ ವಿಪರ್ಯಾಸ. ಆಷ್ಟೇ ಅಲ್ಲ, ನಮ್ಮ ವ್ಯವಸ್ಥೆಯಲ್ಲಿ ರೈತನ ಸ್ಥಾನ ಎಲ್ಲಿದೆ ಎಂಬುದರ ಸಂಕೇತ ಇದು ಎಂದರು.
ಉಪನ್ಯಾಸದ ನಂತರ ಸಭಿಕರೊಂದಿಗೆ ಸಂವಾದ ನಡೆಸಲಾಯಿತು.ಈ ಸಂದರ್ಭದಲ್ಲಿ ಹಲವಾರು ಪ್ರಗತಿಪರ ಚಿಂತಕರು, ರೈತ ಮುಖಂಡರು ಹಾಜರಿದ್ದರು. ಬಹುಮುಖಿಯ ಹೆಚ್.ಕೆ.ರವಿಶಂಕರ್‌ಯವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.