Thursday, January 16, 2025
Google search engine
Homeಇ-ಪತ್ರಿಕೆಜು. 26 ಕಾರ್ಗಿಲ್ ವಿಜಯ: ರೇಡಿಯೋ ಶಿವಮೊಗ್ಗದಿಂದ ದಾಖಲೆಯ 12 ಗಂಟೆಗಳ ಲೈವ್

ಜು. 26 ಕಾರ್ಗಿಲ್ ವಿಜಯ: ರೇಡಿಯೋ ಶಿವಮೊಗ್ಗದಿಂದ ದಾಖಲೆಯ 12 ಗಂಟೆಗಳ ಲೈವ್

 ಶಿವಮೊಗ್ಗ: ಅದು 1999ರ ಜುಲೈ 26 ಭಾರತೀಯರ ಹೆಮ್ಮೆಯ ದಿವಸ. ಅಂದು ಹೆಮ್ಮೆಯ ಭಾರತೀಯ ಸೇನೆಯು ಪಾಕಿಸ್ಥಾನೀ ಸೈನಿಕರನ್ನು ಕಾರ್ಗಿಲ್ ಪ್ರದೇಶದಿಂದ ಹಿಮ್ಮೆಟ್ಟಿಸಿ, ಭಾರತದ ಧ್ವಜವನ್ನು ಹಾರಾಡಿಸಿದ ಮಹತ್ವದ ದಿನ. ಹೀಗಾಗೀ ಜುಲೈ 26ನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ದೇಶವೇ ಹೆಮ್ಮೆಯಿಂದ ಆಚರಿಸುತ್ತಾ ಇದೆ. ಈ ಬಾರಿ ಈ ಸಂಭ್ರಮಕ್ಕೆ 25 ವರ್ಷ. ಈ ರಜತ ಸಂಭ್ರಮಕ್ಕೆ ಈಗ ರೇಡಿಯೋ ಶಿವಮೊಗ್ಗ ಜೊತೆಯಾಗುತ್ತಿದೆ ಎಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಪ್ರಕಟಣೆಯಲ್ಲಿ ಕೋರಿದ್ದಾರೆ.

12 ಗಂಟೆಗಳ ನಿರಂತರ ಲೈವ್

ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಇಂದು (ಜು. 21)ರ  ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದಾಖಲೆಯ ಲೈವ್ ಕಾರ್ಯಕ್ರಮ ನಮ್ಮ ರೇಡಿಯೋ ಶಿವಮೊಗ್ಗದಲ್ಲಿ ಪ್ರಸಾರವಾಗಲಿದೆ. ಭಾರತೀಯ ಸೇನೆಯ ಸಾಧನೆಯನ್ನು ಸ್ಮರಿಸಿಕೊಂಡು, ನಮ್ಮ ಸೇನೆಯ ಬಗ್ಗೆ ಮತ್ತೆ ಮತ್ತೆ ಹೆಮ್ಮೆ ಪಡುವ ಕ್ಷಣಗಳು ಇವಾಗಲಿವೆ ಎಂದಿದ್ದಾರೆ.

ಕಾರ್ಗಿಲ್ ಹುತಾತ್ಮ ವಿಕ್ರಮ್ ಬಾತ್ರಾ ರಣಭೂಮಿಯಲ್ಲಿ ನೀಡಿದ ಉದ್ಘೋಷ ಯೇ ದಿಲ್ ಮಾಂಗೇ ಮೋರ್. ಇದು ಆನಂತರ ಬಹಳ ಜನಪ್ರಿಯ ಘೋಷಣೆ ಆಯಿತು.ಈಗ ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರೇಡಿಯೋ ಶಿವಮೊಗ್ಗ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಯೇ ದಿಲ್ ಮಾಂಗೇ ಮೋರ್  ರೂಪಿಸಿದೆ ಎಂದು ತಿಳಿಸಿದ್ದಾರೆ.

 ಈ ನೇರಪ್ರಸಾರವನ್ನು ಸಾಂದೀಪನಿ ಶಾಲೆಯ ಶಿಕ್ಷಕ, ರಂಗಕರ್ಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಲ್ನಾಡ್ ಓಪನ್ ಗ್ರೂಪ್ ನ ಸ್ಕೌಟ್ ಮಾಸ್ಟರ್ ಚೇತನ್ ಸಿ ರಾಯನಹಳ್ಳಿ ಹಾಗೂ ರಂಗಕರ್ಮಿ, ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ನಡೆಸಿಕೊಡಲಿದ್ದಾರೆ. ಇದರಲ್ಲಿ ಭಾರತೀಯ ಸೇನೆ, ಕಾರ್ಗಿಲ್ ಯುದ್ಧ, ಯುದ್ಧ ನೀತಿಗಳು, ವೀರಯೋಧರ ಕುರಿತಾಗಿ ಮಾತುಗಳು, ವೀರ ಯೋಧರೊಂದಿಗೆ ಸಂವಾದ  ಹಾಗೂ ದೇಶಭಕ್ತಿ ಗೀತೆಗಳು, ಚಲನಚಿತ್ರದ ಹಾಡುಗಳು ಇರುತ್ತವೆ. ಇದರ ಜೊತೆಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧರ ಮಾತುಗಳನ್ನೂ ಕೇಳಲಿದ್ದೀರಿ ಎಂದಿದ್ದಾರೆ.

ದಾಖಲೆಯ ಕಾರ್ಯಕ್ರಮ:

ಕಾರ್ಗಿಲ್ ವಿಜಯ ದಿವಸದ ಸಂಭ್ರಮಕ್ಕೆ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಈ ವಿಶೇಷ ಕಾರ್ಯಕ್ರಮ ಮಹತ್ವದ ಸೇರ್ಪಡೆಯಾಗಿದೆ. ಹೀಗಾಗಿ ಬಾನುಲಿ ಲೋಕದಲ್ಲೇ ಪ್ರಥಮ ಬಾರಿಗೆ ಕಾರ್ಗಿಲ್ ವಿಜಯ ದಿವಸದ ಕುರಿತಾಗಿ ನಿರಂತರ 12 ಗಂಟೆಗಳ ನೇರಪ್ರಸಾರದ ವಿಶಿಷ್ಟ, ವಿಭಿನ್ನ ದಾಖಲೆಯ ಸಾಹಸವನ್ನು ರೇಡಿಯೋ ಶಿವಮೊಗ್ಗ ಮಾಡುತ್ತಿದೆ.

ಸಮಸ್ತ ದೇಶವಾಸಿಗಳೂ ಎದೆತಟ್ಟಿಕೊಂಡು, ಬೀಗುವ ಸಮಯವಿದು. ಗಡಿಯನ್ನು ರಕ್ಷಿಸುತ್ತಾ, ತಮ್ಮ ಕುಟುಂಬ, ಮನೆಯನ್ನು ಮರೆತು ದೇಶಸೇವೆಯಲ್ಲಿ ನಿರತರಾಗಿರುವ ಆ ಎಲ್ಲ ವೀರಯೋಧರನ್ನು ಶ್ಲಾಘಿಸುವ ಸಮಯವಿದು. ಸೇನೆಯಲ್ಲಿದ್ದು, ವೀರಸ್ವರ್ಗವನ್ನು ಸೇರಿದ ನಮ್ಮ ಯೋಧರನ್ನು ಸ್ಮರಿಸುತ್ತಾ, ಅವರ ಕುಟುಂಬದವರ ತ್ಯಾಗವನ್ನು ಕೊಂಡಾಡುವ ಘಳಿಗೆ ಇದು. ದೇಶಸೇವೆಗೆಂದು ತಮ್ಮ ಬದುಕನ್ನು ಮೀಸಲಿಟ್ಟಿರುವ ಎಲ್ಲ ಸೈನಿಕರ ಕುರಿತಾದ ಈ ಕಾರ್ಯಕ್ರಮಕ್ಕೆಂದು ಜುಲೈ 21ರ ಭಾನುವಾರ ಸಾಕ್ಷಿಯಾಗೋಣ. ನಮ್ಮ ದಿನವನ್ನೂ ಮೀಸಲಿಡೋಣ.  ಈ ಕಾರ್ಯಕ್ರಮಕ್ಕೆ ತಾವೂ ಕರೆ ಮಾಡಿ ಮಾತನಾಡಬಹುದು. ತಾವು (ಮೊ: 96 860 96 279)ಗೆ ಕರೆ ಮಾಡಬಹುದು.

ರೇಡಿಯೋ ಶಿವಮೊಗ್ಗ ಆಪ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು, ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ಅವರು  ಕೋರಿರುತ್ತಾರೆ. 

RELATED ARTICLES
- Advertisment -
Google search engine

Most Popular

Recent Comments