![](https://www.nammanaadu.com/wp-content/uploads/2024/07/IMG.jpg)
ಶಿವಮೊಗ್ಗ : ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆಯೇ ಚಿಕನ್ ಗುನ್ಯ, ಜೀಕಾ ವೈರಸ್ ಜ್ವರವೂ ಹೆಚ್ಚಳವಾಗುತ್ತಿರುವುದು ಜಿಲ್ಲೆಯ ಜನರ ಆತಂಕ ಮೂಡಿಸಿದೆ. ಇದೇ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯ ವೈದ್ಯಕೀಯ ಪ್ರಕೋಷ್ಟದ ಒಂದು ತಂಡವು ಸೋಮವಾರ ಇಲ್ಲಿನ ಜಿಲ್ಲಾ ಆಸ್ಪತ್ರೆ ಮೆಗ್ಗಾನ್ ಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ತೆಗೆದುಕೊಂಡಿರುವ ಚಿಕಿತ್ಸಾ ಕ್ರಮಗಳು ಮುನ್ನೇಚ್ಚರಿಕೆ ಕ್ರಮಗ ಳ ಬಗ್ಗೆ ಮಾಹಿತಿ ಪಡೆಯಿತು.ಬಿಜೆಪಿ ಪ್ರಕೊಷ್ಟಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಡಾ.ಸುರೇಶ್, ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ. ಹೇಮಂತ್‌ಕುಮಾರ್ ನೇತೃತ್ವದ ತಂಡವು ,ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ.ತಿಮ್ಮಪ್ಪ ಅವರನ್ನು ಭೇಟಿ ಮಾಡಿ, ಡೆಂಗ್ಯು , ಚಿಕನ್ ಗುನ್ಯಾ ಹಾಗೂ ಜೀಕಾ ವೈರಸ್ ನಿಯಂತ್ರಣಕ್ಕೆ ಆಸ್ಪತ್ರೆಯೂ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ, ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿತು.
ಆಸ್ಪತ್ರೆಯ ಆವರಣದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ವಾರ್ಡಿನಲ್ಲಿರುವ ಕಿಟಕಿಗಳಿಗೆ ಸೊಳ್ಳೆಪರದೆಯನ್ನು ತಕ್ಷಣವೇ ಹಾಕಿಸಬೇಕು, ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತಲು ಎಲ್ಲೂ ನೀರು ನಿಲ್ಲದೆ ಇರುವ ಹಾಗೆ ಕ್ರಮಕೈಗೊಂಡು ಹಾಗೂ ಅನವಶ್ಯಕವಾಗಿ ಬೆಳೆದಿರುವ ಕಾಂಗ್ರೇಸ್ ಮುಂತಾದ ಗಿಡಗಳನ್ನು ತೆಗೆಸುವಂತೆ ಆಸ್ಪತ್ರೆ ಅಧೀಕ್ಷಕರನ್ನು ಒತ್ತಾಯಿಸಿತು.
ಆಸ್ಪತ್ರೆ ಆವರಣದಲ್ಲಿ ಮತ್ತು ವಾರ್ಡ್‌ಗಳಲ್ಲಿ ಕನಿಷ್ಠ ಐದು ಗಂಟೆಗಳಿಗೊಮ್ಮೆ (ಅಗತ್ಯವಿದ್ದಲ್ಲಿ ಮಹಾನಗರಪಾಲಿಕೆ ಸಹಕಾರವನ್ನು ಪಡೆದು) ಫಾಗಿಂಗ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದ್ದಲ್ಲದೆ, ಮೆಗ್ಗಾನ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ಗೆ ಭೇಟಿ ನೀಡಿ ಡೆಂಗ್ಯೂ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಿಗಳಿಗೆ ಅವಶ್ಯಕತೆ ಇರುವ ಬಿಳಿ ರಕ್ತಕಣದ (ವೈಟ್ ಫ್ಲೆಟ್‌ಲೆಟ್ಸ್) ಸಂಗ್ರಹದ ಬಗ್ಗೆ ಮಾಹಿತಿ ಪಡೆದು ಹಾಗೂ ಆಸ್ಪತ್ರೆಯ ಲ್ಯಾಬ್‌ಗೂ ಕೂಡ ಭೇಟಿ ನೀಡಿತು. ಅಲ್ಲಿ ರಕ್ತ ಪರಿಕ್ಷೆ ಮಾಡುವ ಕಿಟ್‌ಗಳ ಲಭ್ಯತೆಯ ಬಗ್ಗೆಯೂ ಬಿಜೆಪಿ ತಂಡವು ಮಾಹಿತಿ ಪಡೆದು ಕೊಂಡಿತು.
ಈ ಸಂದರ್ಭದಲ್ಲಿ ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಹೃಷಿಕೇಶ್ ಪೈ, ಪ್ರಕೋಷ್ಟಗಳ ಜಿಲಾ ಸಹ ಸಂಯೋಜಕ ಡಾ. ಶ್ರೀನಿವಾಸ್‌ರೆಡ್ಡಿ, ವೈದ್ಯಕೀಯ ಪ್ರಕೋಷ್ಟದ ಸಮಿತಿ ಸದಸ್ಯರುಗಳಾದ ಡಾ.ಮರುಳಾರಾಧ್ಯ, ಡಾ.ಗೌತಮ್, ಡಾ.ಸಂತೋಷ್ ಹಾಗೂ ಮುರಳಿಧರ್ ಉಪಸ್ಥಿತರಿದ್ದರು.