ಶಿವಮೊಗ್ಗ: ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲು ನೆರವಾಗುವಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬು ಸದುದ್ದೇಶದಿಂದ ʼಉಪಲಾಷಿತʼ ಯೋಜನೆ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಾಂಶವಿರುವ ಗುರುತಿನ ಕಾರ್ಡ್ ಅನ್ನು ನೀಡಲಾಗುತ್ತದೆ ಎಂದು ವಿಟಲಿಟಿ ಡಿಜಿಟಲ್ ಟೆಕ್ ಸಿಇಒ ಸಂತೋಷ್ ಹೇಳಿದರು.
ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಮತ್ತು ಶಿವಮೊಗ್ಗ ಓ.ಟಿ. ರೋಡ್ ಅಲ್ಲಿ ಶಾಖೆಯನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ನೀಡುವ ಗುರುತಿನ ಕಾರ್ಡ್ ನಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದ್ದು, ಇದರ ಮೂಲಕ ಸೇವೆ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು.
ಈ ಡಿಜಿಟಲ್ ಕಾರ್ಡ್ ನಿಂದ ಪೋಷಕರಿಗೆ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಗಮನ ನೀಡುವುದರ ಜೊತೆ ಅವರ ಶಾಲೆಯ ಹಾಜರಾತಿ ಬಗ್ಗೆಯು ಪ್ರತಿದಿನ ಅಪ್ ಡೇಟ್ ಆಗುವುದರಿಂದ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಲು ಪೋಷಕರಿಗೆ ಸುಲಭವಾಗುತ್ತದೆ ಹಾಗೂ ನಿಖರ ಮಾಹಿತಿ ಲಭ್ಯವಾಗುತ್ತದೆ. ಈ ಕಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಕಾರ್ಯಗಾರಗಳು, ಸಾಧಕರ ವಿಶೇಷ ಮಾಹಿತಿ, ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್/ಕನ್ನಡ ಭಾಷೆ ಕಲಿಕೆ ತರಗತಿಗಳು, ಪರೀಕ್ಷೆ ಪೂರ್ವ ಇತರ ತರಬೇತಿಗಳನ್ನು ನೀಡಲಾಗುತ್ತದೆ ಮತ್ತು ಸಾಧಕರ ಜೊತೆ ನೇರ ಸಮಾಲೋಚನೆ ವ್ಯವಸ್ಥೆ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯ ಗುರುತಿನ ಕಾರ್ಡ್ ಬಳಸಿ ರಿಯಾಯಿತಿ ದರದಲ್ಲಿ ಅಧ್ಯಯನ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಹುದು. ನವೋದಯ, ಸಿಇಟಿ, ನೀಟ್ ನಂತಹ ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ರಜಾದಿನಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಗೆ ಸಂಬಂಧ ಈಗಾಗಲೇ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಯೋಜನೆಯ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳ ಮಟ್ಟದಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಗಮನಕ್ಕೆ ತಂದಿದ್ದು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಉಪಲಾಷಿತ ಯೋಜನೆ ಉಪಯೋಗ ಪಡೆಯಲು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೇಮ, ಗೀತಾ ಚೇತನ್, ಪೂಜಾ ಉಪಸ್ಥಿತರಿದ್ದರು.