ಶಿವಮೊಗ್ಗ : ವಸತಿ ಸಚಿವ ಜಮೀರ್ ಅಹಮದ್ ವಿರುದ್ದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದ ಆಶ್ರಯ ಬಡಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ತಮಗೆ ಭೇಟಿಗೆ ಅವಕಾಶ ಕೊಟ್ಟವರು, ಅಲ್ಲಿಗೆ ಹೋದರೆ ಯಾವುದೇ ಮಾಹಿತಿ ಇಲ್ಲದೆ ವಿದೇಶಕ್ಕೆ ಹಾರಿದ್ದಾರೆ. ಇದು ಅವರು ಮಾಡಿದ ಮಹಾ ಮೋಸವಾಗಿದೆ. ಸಚಿವರ ಈ ನಡೆ ಬೇಸರ ತಂದಿದೆ ಎಂದು ಈಶ್ವರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
ನಗರದ ಗೋವಿಂದಪುರ, ಗೋಪಿ ಶೆಟ್ಟಿಕೊಪ್ಪ ಬಳಿ ನಿರ್ಮಾಣವಾಗಿರುವ ಆಶ್ರಮ ಮನೆಗಳನ್ನು ಬಡವರಿಗೆ ಕೊಡಿಸುವ ತಮ್ಮ ಹೋರಾಟ ಮುಂದುವರೆದಿದೆ. ಇದರ ಭಾಗವಾಗಿಯೇ ಮನೆ ಹಂಚಿಕೆಗಾಗಿ ಒತ್ತಾಯಿಸುವ ಸಲುವಾಗಿ ವಸತಿ ಸಚಿವರ ಸಮಯವನ್ನು ಕೇಳಿದ್ದೇವು. ಅವರೇ ಸಮಯ ನೀಡಿದ್ದರು, ಆದರೆ ಅಲ್ಲಿಗೆ ಹೋದರೆ ಅವರು ವಿದೇಶಿ ಯಾತ್ರೆಗೆ ಹೋಗಿದ್ದರು. ನಮ್ಮನ್ನು ಬರ ಹೇಳಿ ಹೀಗೆ ಹೋಗಿದ್ದು ನಮಗೆ ಬೇಸರ ತರಸಿದೆ ಎಂದರು.
ನಾವು ಇನ್ನು ಸುಮ್ಮನೆ ಕೂರುವುದಿಲ್ಲ. ಸಚಿವರು ಈ ಹಿಂದೆ ತಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈಗಲಾದರೂ ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಆಶ್ರಯ ಮನೆಗಳನ್ನು ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟಸ್ವರೂಪವೇ ಬೇರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದ್ದೆವು. ಅವರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ಕಾರ್ಮಿಕರ ಕಷ್ಟಗಳನ್ನು ಆಲಿಸಿದ್ದಾರೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಯೇ ಸುಮಾರು ೧೦,೬೯೩ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ ೩೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರಬಹುದು. ಜೊತೆಗೆ ಕಟ್ಟಡ ಕಾರ್ಮಿಕರ ಇತರೆ ಸಮಸ್ಯೆಗಳನ್ನು ಕೂಡ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ಒಪ್ಪಿದ್ದಾರೆ ಕೂಡ ಅವರಿಗೆ ಅಭಿನಂದನೆಗಳು ಎಂದರು.