ಕೊಪ್ಪಳ: ರೈತರ ಮಕ್ಕಳಾದ ನಮಗೆ ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ. ಯುವ ರೈತರಿಗೆ ವಧು ಹುಡುಕಿ ಕೊಡಿ ಎಂದು ರೈತ ಯುವಕನೊಬ್ಬ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.
ಇಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.
ರೈತ ಕುಟುಂಬಕ್ಕೆ ಸೇರಿದ ನಾನು ವಿವಾಹವಾಗಲು ಕಳೆದ 10 ವರ್ಷಗಳಿಂದ ವಧು ಹುಡುಕುತ್ತಿದ್ದೇನೆ. ರೈತನೆಂಬ ಕಾರಣಕ್ಕೆ ಯುವತಿಯರು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಮನವಿ ಸಲ್ಲಿಸಿದ್ದಾನೆ.
ಇದರಿಂದಾಗಿ ನಾನು ಮಾನಸಿಕವಾಗಿ ಕುಗ್ಗಿದ್ದೇನೆ. ಯುವ ರೈತರಿಗಾಗಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಿ, ಅವರ ಮಕ್ಕಳ ಬಾಳಿಗೆ ಬೆಳಕು ನೀಡಬೇಕು ಎಂದು ಮನವಿ ಮಾಡಿದ್ದಾನೆ.
ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂಬ ಭರವಸೆ ನೀಡಿ, ಆತನ ಅರ್ಜಿಯನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿದ್ದಾರೆ.