ಶಿವಮೊಗ್ಗ : ರಿಯಲ್ ಎಸ್ಟೇಟ್ ಭೂ ಮಾಫೀಯದವರ ಪರವಾಗಿ ಸುಳ್ಳು ವರದಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನುಕ್ರಮ ಜರುಗಿಸಬೇಕೆಂದು ಮಲೆನಾಡು ಕನ್ನಡ ಪಡೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಪೂಜಾರಿ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲ್ಲೂಕು ತಹಶೀಲ್ದಾರ್ ಹಾಗೂ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆರ್.ವಿ.ನಿರೂಪ ಕುಮಾರ್ ಇವರು ಅಧಿಕಾರಿಗಳ ಮೇಲೆ ಪ್ರಭಾವಬೀರಿ ಭೂ ಮಾಪೀಯದವರ ಪರವಾಗಿ ಸುಳ್ಳು ವರದಿ ನೀಡುತ್ತಿದ್ದು, ಹಿರಿಯ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು.
ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸರ್ವೆ ನಂ. 459/2 ಮತ್ತು 426 ರಲ್ಲಿ ಪಿಎನ್‌ಆರ್ ಗ್ಲೋಬಲ್ ಡೆವಲರ‍್ಸ್ ಎಂಬ ಸಂಸ್ಥೆಯವರು ಬಡಾವಣೆ ನಿರ್ಮಿಸಿದ್ದಾರೆ. ಯಾವುದೇ ವಸತಿ ಬಡಾವಣೆ ಮಾಡಲು ೩೦ ಅಡಿ ಸಂಪರ್ಕ ರಸ್ತೆ ಕಡ್ಡಾಯವಾಗಿರುತ್ತದೆ. ಆದರೆ ಇಲ್ಲಿ ರಸ್ತೆಯೇ ಇರುವುದಿಲ್ಲ. ಆದರೂ ಕೂಡ ಡೆವಲರ‍್ಸ್ ಮಾಲೀಕನು ಆಗಿದ್ದ, ಆರ್.ವಿ.ನಿರೂಪಕುಮಾರ್ ಎಂಬಾತ ಗ್ರಾಮಪಂಚಾಯಿತಿ ಸದಸ್ಯ ರಸ್ತೆಯಿದೆ ಎಂದು ರಿಪ್ಪನ್‌ಪೇಟೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಿಂದ ಸುಳ್ಳು ನಿರಾಪೇಕ್ಷಣ ಪತ್ರ ಪಡೆದು ಭೂ ಪರಿವರ್ತನೆ ಮಾಡಿಕೊಂಡಿದ್ದಾನೆ ಎಂದು ದೂರಿದರು.
ಪತ್ರಿಕಾಗೋಷ್ಟಿಯಲ್ಲಿ ಮಲೆನಾಡು ಕನ್ನಡ ಪಡೆಯ ಉಪಾಧ್ಯಕ್ಷ ಮನೋಹರ್ ಮರಡಿ, ನೂತನ ಮಹಿಳಾ ಅಧ್ಯಕ್ಷೆ ಶೃತಿ, ಸಂಘಟನಾ ಕಾರ್ಯದರ್ಶಿ ಅಶ್ವಿನಿ, ಸಂಘಟನಾ ಸಹಕಾರ್ಯದರ್ಶಿ ದಿವ್ಯಾ ಉಪಸ್ಥಿತರಿದ್ದರು.