ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ಮತದಾನ ಆರಂಭವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
12 ಮಂದಿ ನಿರ್ದೇಶಕರ ಅಯ್ಕೆಗೆ ಸಂಬಂಧಿಸಿದಂತೆ ಈಗ ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು 27 ಮಂದಿ ಅಭ್ಯರ್ಥಿಗಳಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿರುವ ಚುನಾವಣೆಯು ಸಂಜೆ 4 ಗಂಟೆಯವರೆಗೆ ಮುಂದುವರೆಯಲಿದೆ. ಚುನಾವಣೆ ಮುಗಿದ ಬಳಿಕ ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ. ಈ ವರ್ಷ ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯ ರೀತಿಯ ಭಿನ್ನವಾಗಿದೆ. ಹಿಂದೆಂದೂ ಕಾಣದ ಪೈಪೋಟಿ ಈ ಬಾರಿ ಚುನಾವಣೆಯಲ್ಲಿ ಕಾಣಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. 620 ಮತಗಳು ಚಲಾವಣೆಯಾಗಬೇಕಿದೆ.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಎಂಎಡಿಬಿ ಅಧ್ಯಕ್ಷ ಆರ್. ಎಂ. ಮಂಜುನಾಥ್ ಗೌಡ , ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ, ಸೊರಬ ಕಾಂಗ್ರೆಸ್ ಮುಖಂಡ ಕೆ.ಪಿ. ರುದ್ರಗೌಡ, ಬ್ಯಾಂಕಿನ ಮಾಜಿ ನಿರ್ದೇಶಕರಾದ ಎಸ್.ಪಿ. ದಿನೇಶ್, ಬಿ.ಡಿ. ಭೂಕಾಂತ್ , ಸಾಗರ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು ಸೇರಿದಂತೆ ಅನೇಕ ಮಂದಿ ಘಟಾನುಘಟಿ ನಾಯಕರು ಕಣದಲ್ಲಿರುವುದು ಈ ಬಾರಿಯ ನಿರ್ದೇಶಕರ ಆಯ್ಕೆಯ ಚುನಾವಣೆ ರಂಗೇರುವಂತೆ ಮಾಡಿದೆ.
ಒಂದು ರೀತಿ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆ , ಉಳಿದ ಸಾರ್ವತ್ರಿಕ ಚುನಾವಣೆಯ ಮಾದರಿಯನ್ನೇ ಮೀರಿಸುವ ಹಾಗೆ ಮತ ಪಡೆಯಲು ಎಲ್ಲಾ ಬಗೆಯ ಕಸರತ್ತುಗಳಿಗೂ ಮುನ್ನುಡಿ ಬರೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಕೆಲವರು ಮತ ಪಡೆಯುವುದಕ್ಕಾಗಿ ಮತದಾರರಿಗೆ ಭಾರೀ ಪ್ರಮಾಣದ ಹಣದ ಆಸೆ ಆಮಿಷ ವೊಡ್ಡಿದ್ದಾರೆನ್ನುವ ದೂರುಗಳು ಕೇಳಿ ಬಂದಿವೆ. ಆಮಟ್ಟಿಗೆ ಚುನಾವಣೆ ಜಿದ್ದಾಜಿದ್ದಿಗೆ ವೇದಿಕೆ ಆಗಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗ ತೆರೆ ಮರೆಯಲ್ಲಿ ಎಲ್ಲಾ ಕಸರತ್ತುಗಳು ಕಣದಲ್ಲಿದ್ದವರು ಮಾಡಿದ್ದಾರೆನ್ನುವುದನ್ನು ಅಲ್ಲಗಳೆಯುವಂತಿಲ್ಲ.