Tuesday, January 14, 2025
Google search engine
Homeಇ-ಪತ್ರಿಕೆಇಂದು ಮುಂದುವರೆದ ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

ಇಂದು ಮುಂದುವರೆದ ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

ಶಿವಮೊಗ್ಗ : ಕಳೆದ ಮೂರು ನಾಲ್ಕು ದಿನಗಳಿಂದ ಅಬ್ಬರಿಸುತ್ತಿರುವ ಪುನರ್ವಸು ಮಳೆ ಮಲೆನಾಡು ತಾಲೂಕುಗಳಲ್ಲಿ ತನ್ನ ಅರ್ಭಟವನ್ನು ಮುಂದುವರಿಸಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯತೊಡಗಿದ್ದು, ತುಂಗೆ ಅಪಾಯದ ಮಟ್ಟ ತಲುಪಿದೆ.

ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆ ಬೋರ್ಗರೆಯುತ್ತಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುಡುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ತುಂಗೆ, ಭದ್ರೆ, ಶರಾವತಿ, ಮಾಲತಿ ಸೇರಿದಂತೆ ಬಹುತೇಕ ಎಲ್ಲ ನದಿಗಳಿಗೆ ಜೀವಕಳೆ ಬಂದಿದೆ. 

ಶೃಂಗೇರಿ, ಕೊಪ್ಪ, ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದ್ದು, ಪ್ರವಾಹದ ಭೀತಿ ಶಿವಮೊಗ್ಗಕ್ಕೆ ಎದುರಾಗಿದೆ. ಗಾಜನೂರು ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಣೆಕಟ್ಟೆಯಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. 

ಬೆಳಗ್ಗಿನ ಮಾಹಿತಿ ಪ್ರಕಾರ ನದಿಗೆ  61757 ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಪಾರ ಪ್ರಮಾಣದಲ್ಲಿ  ನೀರು ಹರಿದು ಬರುತ್ತಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಸಮೀಪದ ಕಲ್ಲಿನ ಮಂಟಪ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಉಕ್ಕಿ ಹರಿಯುತ್ತಿರುವ ತುಂಗಾ ನದಿಯ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ನದಿ ದಂಡೆಯತ್ತ ಆಗಮಿಸುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಂದಾಗಿರುವ ಲಿಂಗನಮಕ್ಕಿ ಜಲಾಶಯದ ಒಳಹರಿವು 77,911 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಹೀಗಾಗಿ ಗರಿಷ್ಠ 1819 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 1782. 15 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ 4 ಅಡಿ  ನೀರು ಸಂಗ್ರಹವಾಗಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಣಿಯಲ್ಲಿ 240 ಮಿ.ಮೀ., ಯಡೂರು 229 ಮಿ.ಮೀ., ಹುಲಿಕಲ್ಲು  245 ಮಿ.ಮೀ., ಮಾಸ್ತಿಕಟ್ಟೆ 247 ಮಿ.ಮೀ., ಸಾವೇಹಕ್ಲುವಿನಲ್ಲಿ 210 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗ 52 ಮಿ.ಮೀ., ಭದ್ರಾವತಿ 26. 40 ಮಿ.ಮೀ., ತೀರ್ಥಹಳ್ಳಿ 120. 90 ಮಿ.ಮೀ., ಸಾಗರ 129. 10 ಮಿ.ಮೀ., ಶಿಕಾರಿಪುರ  57. 90 ಮಿ.ಮೀ., ಸೊರಬ 58. 50 ಮಿ.ಮೀ. ಹಾಗೂ ಹೊಸನಗರದಲ್ಲಿ 133. 60 ಮಿ.ಮೀ. ಮಳೆಯಾಗಿದೆ.  

…………………………………

ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿತ್ತು.

ಅಲ್ಲದೆ, ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.

RELATED ARTICLES
- Advertisment -
Google search engine

Most Popular

Recent Comments