ಶಿವಮೊಗ್ಗ: ಜಿಲ್ಲೆಯ ಶರಾವತಿ, ಚಕ್ರ, ಸಾವೇಹಕ್ಲು, ವರಾಹಿ, ತುಂಗಾ, ಭದ್ರಾ ಮುಂತಾದ ಯೋಜನೆಯ ಮುಳುಗಡೆ ಸಂತ್ರಸ್ಥರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜುಲೈ 23ರಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಕೆ.ಪಿ.ಸಿ.ಸಿ. ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಹೇಳಿದರು.
ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನವಿಗೆ ಸ್ಪಂದಿಸಿರುವ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಶರಾವತಿ ಯೋಜನೆಯ ಮುಳುಗಡೆ ಸಂತ್ರಸ್ಥರ ಪುನರ್‌ವಸತಿಗೆ ಸಂಬಂಧಿಸಿದ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿ ಪರಿಣಾಮಕಾರಿಯಾಗಿ ವಾದ ಮಂಡನೆಗೆ ಅನುಭವಿ ನ್ಯಾಯಾವಾದಿಗಳ ತಂಡದ ನೇಮಕ ಹಾಗೂ ಮುಳುಗಡೆ ಸಂತ್ರಸ್ಥರು ಪಕ್ಷಗಾರರನ್ನಾಗಿ ಸೇರ್ಪಡೆ ಮಾಡಲು ಅವಶ್ಯ ಸಹಕಾರವನ್ನು ರಾಜ್ಯ ಸರ್ಕಾರ ನೀಡುವ ಭರವಸೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ನೀಡಿದರು ಎಂದು ಅವರು ತಿಳಿಸಿದರು.
ಜಲ ವಿದ್ಯುತ್ ಹಾಗೂ ನೀರಾವರಿ ಯೋಜನೆಗಳ ಮುಳುಗಡೆ ಸಂತ್ರಸ್ಥರಿಗೆ ನೀಡಲಾದ ಭೂಮಿಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಟ್ಟು ಡಿ-ನೋಟಿಫಿಕೇಷನ್ ಹಾಗೂ ‘ಡಿ’ ರಿಸರ್ವ್ ಮಾಡುವ ಬಗ್ಗೆ ಅಗತ್ಯ ಕ್ರಮ ಮತ್ತು 1997 ಮೇ 5ರ ಸರ್ಕಾರಿ ಆದೇಶದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 1978 ಎಪ್ರಿಲ್ 27 ಪೂರ್ವದ 3 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿಯನ್ನು ಸಕ್ರಮಗೊಳಿಸಿ ಪಟ್ಟಾ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಅರಣ್ಯ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜಣ್ಣ, ರಘುಪತಿ, ಸಿ.ಜು.ಪಾಶಾ, ಜಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು.