ಶಿವಮೊಗ್ಗ: ಅತ್ತ ಭದ್ರಾ ನದಿ ಉಕ್ಕಿ ಹರಿಯುತ್ತಿರುವ ಹಾಗೆಯೇ ತುಂಗಾ ನದಿ ಕೂಡ ಉಕ್ಕಿ ಹರಿಯ ತೊಡಗಿದೆ. ಗಾಜನೂರು ಬಳಿಯ ತುಂಗಾ ಜಲಾಶದ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ತೆಗೆದು, ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶಿವಮೊಗ್ಗದ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ.
ನಗರದ ಶಾಂತಮ್ಮ ಲೇಔಟ್, ಸೀಗೆಹಟ್ಟಿ, ಕುಂಬಾರ ಗುಂಡಿ, ರಾಜೀವ್ ಗಾಂಧಿ ಬಡಾವಣೆ, ಆರ್ ಟಿ ನಗರ, ನಿಸರ್ಗ ಬಡಾವಣೆ ಹಾಗೂ ವಿದ್ಯಾನಗರ ೧೩ ಮತ್ತು ೧೪ನೇ ಕ್ರಾಸಿನ ಜನರು ಬುಧವಾರ ಇಡೀ ರಾತ್ರಿ ಪ್ರವಾಹದ ಭೀತಿಯಿಂದ ನಿದ್ದೆಇಲ್ಲದೆ ಕಳೆದರು. ಈ ಭಾಗದ ಜನರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.
ಇದಲ್ಲದೆ, ನಗರದ ರಿವರ್ ಫ್ರೆಂಟ್ ಭವನ, ಬಾಪೂಜಿನಗರ ಸರ್ಕಾರಿ ಶಾಲೆ, ರಾಮಣ್ಣ ಶೆಷ್ಟಿ ಪಾರ್ಕ್. ಸೀಗೆಹಟ್ಟಿ ಸರ್ಕಾರಿ ಶಾಲೆಯಲ್ಲಿ ಈಗಾಗಲೇ ಪಾಲಿಕೆ ವತಿಯಿಂದ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಬುಧವಾರ ರಾತ್ರಿ ೧೫ ಕುಟುಂಬಗಳಿಗೆ ಆಹಾರ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.