Wednesday, January 22, 2025
Google search engine
Homeಅಂಕಣಗಳುಲೇಖನಗಳುಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಿನ್ನೋಟ...- ಈ ಬಾರಿ ಯಾರು...?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಿನ್ನೋಟ…- ಈ ಬಾರಿ ಯಾರು…?

ಕಸಭಾ ಚುನಾವಣೆ ಈಗಾಗಲೇ ಘೋಷಣೆ ಯಾಗಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಏ.೨೩ರಂದು ಚುನಾವಣೆ ಈಗಾಗಲೇ ನಿಗಧಿಯಾಗಿದೆ.
ಬಿಜೆಪಿ ವತಿಯಿಂದ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅಭ್ಯರ್ಥಿಯಾಗಲಿದ್ದು, ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧುಬಂಗಾ ರಪ್ಪ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ನೇರ ಹಣಾಹಣಿ ಉಂಟಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಕಳೆದ ಹಲವು ದಶಕಗಳ ಕಾಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ೧೯೯೮ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಆಯನೂರು ಮಂಜುನಾಥ್ ಜಯಶಾಲಿಯಾಗುವ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯನ್ನು ಮುರಿದಿದ್ದರು. ಅಂದು ಬಿಜೆಪಿ ಯಿಂದ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದರೆ ಕಾಂಗ್ರೆಸ್ ನಿಂದ ಡಿ.ಬಿ. ಚಂದ್ರೇಗೌಡ ಹಾಗೂ ಕರ್ನಾಟಕ ಕಾಂಗ್ರೆಸ್ ನಿಂದ ಎಸ್.ಬಂಗಾರಪ್ಪ ಹುರಿಯಾಳು ಗಳಾಗಿದ್ದರು.
ಇದಾದ ಒಂದು ವರ್ಷಕ್ಕೆ ಪುನಃ ಲೋಕಸಭೆಗೆ ಚುನಾವಣೆ ಎದುರಾಯಿತು. ಈ ಸಂದರ್ಭದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಬಂಗಾರಪ್ಪ, ಆಯನೂರು ಮಂಜುನಾಥ್ ರನ್ನು ಪರಾಭವಗೊಳಿಸಿ ಲೋಕಸಭೆಗೆ ಆಯ್ಕೆಯಾದರು.
ಆಯನೂರು ಮಂಜುನಾಥ್ ಗೆಲುವಿಗಿಂತ ಮೊದಲು ಕಾಂಗ್ರೆಸ್ ಹಿಡಿತದಲ್ಲಿದ್ದ ಲೋಕಸಭಾ ಕ್ಷೇತ್ರವನ್ನು ಅನೇಕರು ಪ್ರತಿನಿಧಿಸಿದ್ದರು. ಕಾಂಗ್ರೆಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ಆ ದಿನಗಳಲ್ಲಿ ಜನಮಾನಸದಲ್ಲಿತ್ತು. ಇದರಿಂದಾಗಿ ಕಾಂಗ್ರೆಸ್‌ನ ಅಭ್ಯರ್ಥಿಗಳು ಹೆಚ್ಚು ಶ್ರಮ ಪಡದೇ ಗೆಲುವು ಸಾಧಿಸುತ್ತಿದ್ದರು. ಕಳೆದ ೨೦೦೯ರಲ್ಲಿ ನಡೆದ ಚುನಾವಣೆ ಯಲ್ಲಿ ಬಿ.ವೈ.ರಾಘವೇಂದ್ರ ಅವರು, ಬಂಗಾರಪ್ಪ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.
ಕಳೆದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ೩,೬೩,೩೦೫ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಷ್ಟ್ರದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿಂದ ವಿಜೇತರಾದ ಮೂರನೇ ಅಭ್ಯರ್ಥಿಯಾಗಿ ಹೊರಹೊಮ್ಮಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಜುನಾಥ್ ಭಂಡಾರಿ, ೨,೪೨,೯೧೧ ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್ ೨,೪೦,೬೩೬ ಮತಗಳನ್ನು ಪಡೆದಿ ದ್ದರು. ಈ ಎರಡೂ ಪಕ್ಷದ ಮತಗಳನ್ನು ಸೇರಿಸಿದರೂ ಸಹ ಬಿಜೆಪಿ ೧,೨೨,೬೬೯ ಮತಗಳ ಅಂತರದಿಂದ ಮುಂದಿತ್ತು.
ಕಳೆದ ವರ್ಷ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ೭ ರಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯಶಾಲಿಯಾದರು. ಭದ್ರಾವತಿ ಕ್ಷೇತ್ರದಿಂದ ಬಿ.ಕೆ. ಸಂಗಮೇಶ್ ಕಾಂಗ್ರೆಸ್‌ನ ಏಕೈಕ ಶಾಸಕರಾಗಿ ಜಯಶಾಲಿಯಾದರು.
ಇದರಿಂದಾಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಾಯಿತು. ಈ ಸಂದರ್ಭದಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಆಗಿನ ಸಂಸದ ಬಿ.ಎಸ್.ಯಡಿಯೂರಪ್ಪನವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಈ ಸ್ಥಾನಕ್ಕೆ ಕಳೆದ ಐದು ತಿಂಗಳ ಹಿಂದೆ ಉಪಚುನಾವಣೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿಯಿಂದ ಬಿ.ವೈ.ರಾಘ ವೇಂದ್ರ ಸ್ಪರ್ಧಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಬಿ.ವೈ.ರಾಘ ವೇಂದ್ರಅವರು ಮಧುಬಂಗಾರಪ್ಪ ಅವರನ್ನು ೫೨,೧೪೮ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಬಿ.ವೈ.ರಾಘವೇಂದ್ರ ಅವರಿಗೆ ೫,೪೩,೩೦೬ ಮತಗಳು ಲಭಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಮಧುಬಂಗಾರಪ್ಪ ಅವರಿಗೆ ೪,೯೧,೧೫೮ ಮತಗಳು ಲಭಿಸಿದವು. ಈ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭದ್ರಾವತಿಯ ಶಶಿಕುಮಾರ್‌ಗೌಡ ೧೭,೧೮೯ ಮತಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಿಮಾ ಪಟೇಲ್ ೮,೭೧೩ ಮತಗಳನ್ನು ಪಡೆದರೆ, ನೋಟಾಗೆ ೧೦,೬೮೭ ಮತಗಳು ಬಿದ್ದಿದ್ದವು.
ಕೇವಲ ೫೨,೧೪೮ ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಧುಬಂಗಾರಪ್ಪ ಈ ಬಾರಿಯೂ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವನ್ನು ಸಾಧಿಸಲೇಬೇಕೆಂಬ ಹಿನ್ನೆಲೆಯಲ್ಲಿ ಮಧು ಸೇರಿದಂತೆ ಜೆಡಿಎಸ್‌ನ ನಾಯಕರುಗಳು ಪಣತೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರನ್ನು ಹೊರತುಪಡಿಸಿದರೆ, ಇತರೇ ಯಾವುದೇ ಆ ಪಕ್ಷದ ಮುಖಂಡರು ಚುನಾವಣೆ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಇವರುಗಳು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದಾರೆ.
ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪಾಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಬೇಕು. ಆ ಮೂಲಕ ಬಿಜೆಪಿ ನಾಯಕರ ಪ್ರಾಬಲ್ಯ ಕುಗ್ಗಿಸಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್- ಜೆಡಿಎಸ್ ಮುಖಂಡರು ಒಮ್ಮತದ ಅಭ್ಯರ್ಥಿಯಾಗಿ ಮಧುಬಂಗಾರಪ್ಪರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಯ ಪರಾಭವಕ್ಕೆ ಮುಂದಾಗಿದ್ದಾರೆ. ಇದನ್ನು ಅರಿತಿರುವ ಬಿಜೆಪಿ ಸಹ ಈಗಾಗಲೇ ಕ್ಷೇತ್ರದಾದ್ಯಂತ ತನ್ನ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ
ಒಟ್ಟಾರೆ ಮತದಾರ ಪ್ರಭು ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ವಿಜಯದ ಮಾಲೆ ಹಾಕುತ್ತಾನೆಂಬುದು ಕುತೂಹಲದ ಪ್ರಶ್ನೆಯಾಗಿದೆ.
ಜಿ.ಸಿ.ಸೋಮಶೇಖರ್, ಶಿವಮೊಗ್ಗ

RELATED ARTICLES
- Advertisment -
Google search engine

Most Popular

Recent Comments