
ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ ಅಂಗವಾಗಿ ಹಣ್ಣುಗಳ ಪ್ರದರ್ಶನ-ಮಾರಾಟ
ಶಿವಮೊಗ್ಗ : ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏ.26 ರಿಂದ 28 ರವರೆಗೆ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ತಿಳಿಸಿದರು.
ಹಣ್ಣು ಮತ್ತು ಆಹಾರ ಮೇಳದ ಕುರಿತು ಮಾಹಿತಿ ನೀಡಲು ಬುಧವಾರ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರವು 2025 ಕ್ಕೆ ತನ್ನ 25 ವರ್ಷಗಳ ನಿರಂತರ ರೈತಪರ ಸೇವಾ ಕೊಡುಗೆಯನ್ನು ಪೂರೈಸಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಪ್ರಯುಕ್ತ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರ, ನವಿಲೆ ಆವರಣದಲ್ಲಿ ಏಪ್ರಿಲ್ 26 ರಿಂದ 28 ರವರೆಗೆ ‘ಹಣ್ಣು ಮತ್ತು ಆಹಾರ ಮೇಳ’ವನ್ನು ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಮೇಳ ಜರುಗಲಿದ್ದು, ಈ ಮೇಳದಲ್ಲಿ ವೈವಿಧ್ಯಮಯ ಮಾವಿನ ಹಣ್ಣುಗಳು, ಹಲಸು, ಬಾಳೆ ಹಾಗೂ ವಿವಿಧ ಜಾತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಹಣ್ಣು ಪ್ರಿಯರಿಗಾಗಿ ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣಿನ 30 ವಿಶಿಷ್ಟ ಮಾವಿನ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಕೇಸರ್, ಮಲಗೋವಾ, ಮಲ್ಲಿಕಾ, ನೀಲಂ, ರಸಪುರಿ, ಸಿಂಧೂರ, ತೋತಾಪುರಿ, ಅಪ್ಪೆ ಮಿಡಿ ತಳಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಅಲ್ಲದೆ, 20 ವಿವಿಧ ಹಲಸಿನ ತಳಿಗಳಾದ ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ. ಕೆಂಪು, ಚಂದ್ರ ಹಲಸು, ಹೆಬ್ಬಾಳ ಸೇರಿದಂತೆ ಸಖರಾಯಪಟ್ಟಣದ ಸ್ಥಳೀಯ ವಿಶೇಷ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ವಿವಿಧ ತಳಿಯ ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ.
ಬಿಜಾಪುರ, ಬಾಗಲಕೋಟೆ ಮತ್ತಿತರ ಭಾಗಗಳಿಂದ ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್ ಇತ್ಯಾದಿ ತಳಿಯ ರುಚಿಕರ ದ್ರಾಕ್ಷಿ ಹಣ್ಣುಗಳು ಆಗಮಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಭಾಗದಿಂದ ಬೆಂಗಳೂರು ಬ್ಲೂ ದ್ರಾಕ್ಷಿ ಬರಲಿದೆ. ಹೀಗಾಗಿ ದ್ರಾಕ್ಷಿ ಪ್ರಿಯರಿಗೆ ಬಗೆ ಬಗೆಯ ಹಣ್ಣುಗಳು ಲಭಿಸಲಿವೆ. ಅಲ್ಲದೆ, ಗೆಡ್ಡೆ-ಗೆಣಸು ತಳಿಗಳ ಪ್ರದರ್ಶನ ಹಾಗೂ ಬೇಲದ ಹಣ್ಣು, ಅಂಜೂರ ಹಣ್ಣು, ಬಿಜಾಪುರದ ನಿಂಬೆ ಹಣ್ಣು, ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಮತ್ತು ರೈತರು ತಾವೇ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶಿಷ್ಟ ಖಾದ್ಯಗಳು : ಮಲೆನಾಡಿನ ವಿಶಿಷ್ಟ ಸಿಹಿ ಖಾದ್ಯಗಳಾದ ತೊಡೆದೇವು, ಅಪ್ಪೆಮಿಡಿ, ಹಲಸು, ಬಾಳೆ, ಅನಾನಸ್, ಅಂಜೂರ, ಗೇರು, ಮುರುಗಲು, ಪುನರ್ಪುಳಿ ಇತ್ಯಾದಿಗಳ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಈ ಮೇಳದ ಅಂಗವಾಗಿ ಬೇಸಿಗೆಯ ಸವಿರುಚಿಗಳಾದ ದಾವಣಗೆರೆ ಬೆಣ್ಣೆದೋಸೆ, ಹುಬ್ಬಳ್ಳಿ ಮಿರ್ಚಿ ಮಂಡಕ್ಕಿ, ಆಲೂ ಟ್ವಿಸ್ಟರ್ ಇತ್ಯಾದಿ ಖಾದ್ಯಗಳು ಈ ಮೇಳದ ಪ್ರಮುಖ ಆಕರ್ಷಣೆಗಳಾಗಿವೆ.
8 ಲಕ್ಷ ಸಸಿಗಳು ಲಭ್ಯ, 150 ಮಳಿಗೆ ಸ್ಥಾಪನೆ, ತಾಂತ್ರಿಕ ಸಮಾವೇಶಗಳ ಆಯೋಜನೆ, ವಿದ್ಯಾರ್ಥಿಗಳಿಗೆ ಸ್ಪಧೆಗಳು, ಪಾಕ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರೈತರು, ನಾಗರೀಕರು, ವಿದ್ಯಾರ್ಥಿಗಳು, ಸ್ವ ಸಹಾಯ ಗುಂಪಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ ಡಾ.ಕೆ.ಸಿ.ಶಶಿಧರ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಡಿ.ತಿಪ್ಪೇಶ, ಸಹ ಸಂಶೋಧನಾ ನಿರ್ದೇಶಕ ಡಾ.ಪ್ರದೀಪ್ ಪಾಲ್ಗೊಂಡಿದ್ದರು.