ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಪಡಿಸಿದ ಮತ್ತು ಮುಂದೂಡಲ್ಪಟ್ಟ ಯುಜಿಸಿ-ನೆಟ್ ಪರೀಕ್ಷೆಗಳಿಗೆ ಹೊಸ ದಿನಾಂಕವನ್ನು ಪ್ರಕಟಿಸಿದೆ.
ಯುಜಿಸಿ-ನೆಟ್ ಅರ್ಹತಾ ಪರೀಕ್ಷೆಯನ್ನು ಈಗ ಆಗಸ್ಟ್ 21ರಿಂದ ಸೆಪ್ಟೆಂಬರ್ 4 ನಡುವೆ ನಡೆಸಲಾಗುವುದು ಎಂದು ಘೋಷಿಸಿದೆ.
ಜೂನ್ 18ರಂದು ಯುಜಿಸಿ ನೆಟ್ ಪರೀಕ್ಷೆ ನಡೆದಿದೆ. ಆದರೆ ಪ್ರಶ್ನಾ ಪತ್ರಿಕೆ ಸೋರಿಕೆ ಆಗಿದ್ದ ಬಗ್ಗೆ ಶಿಕ್ಷಣ ಸಚಿವಾಲಯಕ್ಕೆ ಮಾಹಿತಿ ಬಂದ ಕಾರಣ ಪರೀಕ್ಷೆ ನಡೆದ ಒಂದು ದಿನದೊಳಗೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಪ್ರಶ್ನೆ ಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆಯಾಗಿದೆ ಮತ್ತು ಟೆಲಿಗ್ರಾಮ್ ಆ್ಯಪ್‌ನಲ್ಲಿ ಪ್ರಸಾರವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಯುಜಿಸಿ ನೆಟ್ ಪರೀಕ್ಷೆ ರದ್ದಾದ ಬಳಿಕವೇ ಕಳೆದ ಭಾನುವಾರ ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ (ನೀಟ್ ಪಿಜಿ) ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆ ನಡೆಯುವುದಕ್ಕೂ 10 ಗಂಟೆಗೂ ಮುನ್ನ ಪರೀಕ್ಷೆ ಮುಂದೂಡಿಕೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಯುಜಿಸಿ-ನೆಟ್ ಜೂನಿಯರ್ ರಿಸರ್ಚ್ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಯಾಗಿದೆ. ಈ ಹಿಂದೆ ಆಫ್‌ಲೈನ್‌ನಲ್ಲಿ ನಡೆಸಲಾಗಿದ್ದ ಪರೀಕ್ಷೆಯನ್ನು ಹಿಂದಿನ ಮಾದರಿಯಂತೆ ಹದಿನೈದು ದಿನಗಳ ಕಾಲ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ ನಡೆಸಲಾಗುತ್ತದೆ.