ದಾವಣಗೆರೆ: ಜಿಲ್ಲೆಯ ಹರಿಹರ ಬಳಿ ಹಾಯ್ದು ಹೋಗುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ತುಂಗಭದ್ರ ನದಿ ಹಿನ್ನೀರು ಸ್ಮಶಾನಕ್ಕೆ ನುಗ್ಗಿದ ಪರಿಣಾಮ ಇಡೀ ಸ್ಮಶಾನ ಜಲಾವೃತವಾಗಿ ಶವಸಂಸ್ಕಾರಕ್ಕೆ ಜನರು ಪರದಾಟ ನಡೆಸಿದರು. ಈ ಘಟನೆ ಹರಿಹರ ಹೊರ ವಲಯದ ಗುತ್ತೂರಿನಲ್ಲಿ ನಡೆದಿದೆ.
ಗುತ್ತೂರಿನ ಮಂಜಪ್ಪ ಎಚ್.ಎಂ.(70) ಮೃತಪಟ್ಟಿದ್ದು, ಸ್ಮಶಾನದ ತುಂಬಾ ನದಿ ಹಿನ್ನೀರು ತುಂಬಿದ್ದರಿಂದ ಶವಸಂಸ್ಕಾರ ಎಲ್ಲಿ ಮಾಡುವುದು ಎಂಬ ಚಿಂತೆ ಸಂಬಂಧಿಕರಿಗೆ ಶುರುವಾಯಿತು. ಹಿನ್ನೀರಿನ ದಿಬ್ಬವನ್ನು ಹುಡುಕುತ್ತ ಶವವನ್ನು ಎತ್ತಿಕೊಂಡು ಸೊಂಟ ಮಟ್ಟದ ನದಿ ನೀರಲ್ಲೆ ಸಾಗಿ ಎತ್ತರದ ಪ್ರದೇಶದಲ್ಲಿ ಶವಸಂಸ್ಕಾರ ನೆರೆವೇರಿಸಿದರು. ಸಂಬಂಧಿಕರು ನದಿ ತೀರದಲ್ಲೆ ನಿಂತು ಶವ ಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದರು.
ಹರಿಹರದ ಹೊರವಲಯದ ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಅಕ್ರಮ ಮಣ್ಣು, ಮರಳುಗಾರಿಕೆಯ ಪರಿಣಾಮ ನದಿ ನೀರು ಸ್ಮಶಾನಕ್ಕೆ ನುಗ್ಗುತ್ತಿದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಮಣ್ಣು ಮತ್ತು ಮರಳುಗಾರಿಕೆ ವಿರುದ್ಧ ಹಲವಾರು ಭಾರಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಸರ್ಕಾರ ಗುತ್ತೂರಿಗೆ ಎತ್ತರದ ಪ್ರದೇಶದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಮುಂಗಾರು ಮಳೆ ಅಬ್ಬರಿಸುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ ವರ್ಷ ಬರಗಾಲದಿಂದ ಬೇಸತ್ತ ಜನರಿಗೆ ಪುನರ್ವಸು, ಪುಷ್ಯ ಜೋಡಿ ಮಳೆಗಳು ಚನ್ನಾಗಿ ಸುರಿದು ರೈತರ ಮೊಗದಲ್ಲಿ ಹರ್ಷ ತಂದಿವೆ. ಇನ್ನೊಂದೆಡೆ ಅಲ್ಲಲ್ಲಿ ಪ್ರವಾಹ, ಗುಡ್ಡ ಕುಸಿತ ಮನೆಗಳು ಹಾನಿ ಬೆಳೆ ನಷ್ಟದಂತಹ ಅತೀವೃಷ್ಠಿ ಸಮಸ್ಯೆಗಳು ಕೇಳಿ ಬಂದಿದ್ದು, ಗುತ್ತೂರಿನಲ್ಲಿ ಸ್ಮಶಾನಕ್ಕೆ ನದಿ ನೀರು ಶವಸಂಸ್ಕಾರಕ್ಕೆ ಜನರು ಪರದಾಡುವಂತಾಗಿದೆ.