ಚಿಕ್ಕಮಗಳೂರು: ರಾಜ್ಯದ್ಯಾಂತ ಇಂದು ಮಳೆ ಮತ್ತಷ್ಟು ಬಿರುಸು ಪಡೆದಿದೆ. ಇದರೊಂದಿಗೆ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ. ಮಲೆನಾಡಿನಲ್ಲಂತೂ ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ನದಿಯೊಂದರಲ್ಲಿ ದನವೊಂದು ಕೊಚ್ಚಿ ಹೋಗಿರುವ ಹೃದಯ ಕಲಕುವ ದೃಶ್ಯ ನಡೆದಿದೆ.
ಮಲೆನಾಡಲ್ಲಿ ಮಳೆಯ ರುದ್ರನರ್ತನಕ್ಕೆ ಜನರ ಜೊತೆ ಜಾನುವಾರುಗಳಿಗೂ ಉಳಿಗಾಲವಿಲ್ಲ ಎಂಬಂತಾಗಿದೆ. ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಹೋಗುತ್ತಿದ್ದ ದನವೊಂದು ನೋಡ ನೋಡುತ್ತಿದ್ದಂತೆಯೇ ನದಿಪಾಲಾಗಿರುವ ಘಟನೆ ನಡೆದಿದೆ.
ಒಂದು ದಡದಿಂದ ಮತ್ತೊಂದು ದಡಕ್ಕೆ ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದ ದನ, ರಸ್ತೆಯ ಸರಿ ಸಮಾನವಾಗಿ ಹರಿಯುತ್ತಿರುವ ನದಿಯತ್ತ ಹೆಜ್ಜೆ ಹಾಕಿದ್ದು, ದಡಕ್ಕಿಂತ ತುಸು ದೂರ ಇರುವಾಗಲೇ ನದಿಗೆ ಬಿದ್ದು ಕೊಚ್ಚಿಹೋಗಿದೆ.
ಹೆಬ್ಬಾಳೆ ಸೇತುವೆ ಮೇಲೆ 2–3 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ಯಾವುದು ರಸ್ತೆ ಯಾವುದು ನದಿ ಎಂದು ತಿಳಿದೇ ದನ ನದಿಗೆ ಬಿದ್ದು ನೀರುಪಾಲಾಗಿದೆ.
ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಜನರ ಕಣ್ಣೆದುರೇ ಭದ್ರೆಯ ಒಡಲಲ್ಲಿ ರಾಸು ಕೊಚ್ಚಿಕೊಂಡು ಹೋಗಿದೆ.