ದಾವಣಗೆರೆ : ಮಾಜಿ ಸಚಿವ ಬಿ.ಸಿ ಪಾಟೀಲ್ ಅವರ ಅಳಿಯ ಕೆ.ಜಿ ಪ್ರತಾಪ್ ಕುಮಾರ್(41) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಿವಮೊಗ್ಗ- ಹರಿಹರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ಪ್ರತಾಪ್ ಕುಮಾರ್ ವಿಷ ಸೇವಿಸಿದ್ದು ತಕ್ಷಣ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಎಂದು ಗುರುತಿಸಲಾಗಿದೆ. ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್, 15 ವರ್ಷದ ಹಿಂದೆ ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯಳನ್ನು ಮದುವೆಯಾಗಿದ್ದರು.
ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಈ ಬಗ್ಗೆ ಮಾತನಾಡಿದ ಬಿ.ಸಿ.ಪಾಟೀಲ್, ಮಧ್ಯಾಹ್ನ 1.45 ಕ್ಕೆ ಬ್ರದರ್ ಫೋನ್ ಮಾಡಿದ್ರು, ಪ್ರತಾಪ್ ಕಾಣೆಯಾಗಿದ್ದಾರೆ ಅಂತಾ ತಿಳಿಸಿದರು. ಈ ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ಹೊನ್ನಾಳಿಯಿಂದ ವಿಚಾರ ಗೊತ್ತಾಯಿತು. ಜೋಳಕ್ಕೆ ಹಾಕುವ ಔಷಧಿ ಕುಡಿದಿದ್ದಾರೆ ಎಂದು ತಿಳಿದು ಬಂತು, ತಕ್ಷಣ ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ದೇವು. ಆದರೆ ಶಿವಮೊಗ್ಗ ಹತ್ರ ಅಂತಾ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ. ಅವರಿಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು, ಡಿ ಅಡಿಕ್ಷನ್ ಸೆಂಟರ್‍ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು ಎಂದು ತಿಳಿಸಿದರು.
ತಮ್ಮ ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು. 16 ವರ್ಷ ಆಗಿತ್ತು ಮದುವೆ ಆಗಿ, ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು ಎಂದು ತಿಳಿಸಿದ ಅವರು, ನಾಳೆ ಚನ್ನಗಿರಿ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಸಲಿದೆ ಎಂದು ತಿಳಿಸಿದರು.
ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ರೇಣುಕಾಚಾರ್ಯ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ದೌಡಾಯಿಸಿದ್ದಾರೆ.