ರಾಜ್ಯ ಸರ್ಕಾರದ ನಿಲುವಿಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ
ಶಿವಮೊಗ್ಗ : ಹುಬ್ಬಳ್ಳಿ ಗಲಭೆಯಲ್ಲಿನ ಆರೋಪಿಗಳ ಮೇಲಿನ ಪ್ರಕರಣ ವಾಪಾಸ್ ಪಡೆದ ರಾಜ್ಯ ಸರ್ಕಾರದ ನಿಲುವಿಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರು ಅಂದಾಕ್ಷಣ ಅವರು ಏನೂ ಮಾಡಿದರೂ ಕ್ಷಮಿಸಬೇಕು ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಮುಸಲ್ಮಾನರ ಮೇಲಿರುವ ಪ್ರಕರಣವನ್ನು ರಾಜ್ಯ ಸರ್ಕಾರ ರದ್ದು ಮಾಡಬಾರದಿತ್ತು. ಮುಸ್ಲಿಮರು ಅಂದಾಕ್ಷಣ ಅವರು ಏನೂ ಮಾಡಿದರೂ ಕ್ಷಮಿಸಬೇಕು ಎಂದರೆ ಹೇಗೆ? ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆಯೇ ದಂಗೆ ಎದ್ದ 155 ಗೂಂಡಾಗಳ ಮೇಲೆ ಹಾಕಿದ ಕೇಸ್ ರದ್ದು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಹೀಗೇ ಆದರೆ ರಾಜ್ಯ ಗೂಂಡಾ ರಾಜ್ಯವಾಗಲಿದ್ದು, ಬಾಂಗ್ಲಾ ದೇಶದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ವಕ್ಪ್ ಆಸ್ತಿಯ ಬಗೆಗಿನ ಚರ್ಚೆಗೆ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಜಂಟಿ ಸಮಿತಿ ಅಡಿಯಲ್ಲಿ ವಕ್ಪ್ ಆಸ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಪ್ ಆಸ್ತಿಯ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿ ಬಡ ಮುಸ್ಲಿಂ ವ್ಯಕ್ತಿಗಳಿಗೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಕೆಲವೇ ಕೆಲವು ಮುಸ್ಲಿಂ ಮುಖಂಡರ ಪಾಲಾಗಿದೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು. ಆಗ ಕಾಂಗ್ರೆಸ್ ಮುಖಂಡರು ಮತ್ತು ಆಸ್ತಿ ಲೂಟಿ ಮಾಡಿದ ಪ್ರಬಲ ನಾಯಕರು ಬಲವಾಗಿ ವಿರೋಧಿಸಿದ್ದರು. ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪರಿಷತ್ ನಲ್ಲಿ ಹಲವು ಬಾರಿ ಈ ವರದಿ ಬಹಿರಂಗಪಡಿಸಲು ಒತ್ತಾಯಿಸಿದ್ದೆ ಎಂದು ತಿಳಿಸಿದರು.
ಆಗಿನ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರು ತಮಗೂ ಜೀವ ಬೆದರಿಕೆ ಇದ್ದರೂ ಲೆಕ್ಕಿಸದೇ ಆ ವರದಿಯನ್ನು ಟೇಬಲ್ ಗೆ ತಂದಿದ್ದರು. ಈಗ ಅದರು ಕೇಂದ್ರದ ಸಂಸದೀಯ ಮಂಡಳಿಯಲ್ಲಿ ಕೂಡ ಚರ್ಚೆಗೆ ಬಂದಿದೆ. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮೊದಲಾದ ನಾಯಕರ ಹೆಸರೂ ಇದೆ. ಕಾಂಗ್ರೆಸ್ ಪಕ್ಷ ಬಡ ಮುಸ್ಲಿಮರ ಆಸ್ತಿ ರಕ್ಷಣೆಗಾಗಿ ಈ ವರದಿಗೆ ಅಡ್ಡಿಪಡಿಸಬಾರದು. ಹಾಗೂ ಡಿ.ಹೆಚ್. ಶಂಕರಮೂರ್ತಿ ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಭದ್ರತೆ ಒದಗಿಸಬೇಕು ಎಂದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ಭಾರಿ ದೈವಭಕ್ತರಾಗಿದ್ದಾರೆ. ಸಿದ್ಧರಾಮಯ್ಯನವರು ಇದೇ ಭಕ್ತಿಯನ್ನು ಮುಂದುವರೆಸಲಿ. ಈಗಲಾದರೂ ಅವರಿಗೆ ದೇವರ ಮೇಲೆ ಭಕ್ತಿ ಬಂದಿರುವುದು ನನಗೆ ಸಂತಸ ತಂದಿದೆ ಎಂದರು. ದಲಿತರ ಚಾಂಪಿಯನ್ ಎಂದು ಹೇಳುವ ಅವರು 9 ವರ್ಷದ ಕೆಳಗೆ ಕಾಂತರಾಜ್ ವರದಿ ಜಾರಿಗೆ ತರಲು ನಾನು ಹಲವು ಬಾರಿ ಒತ್ತಾಯಿಸಿದ್ದರೂ ಇದುವರೆಗೂ ಜಾರಿಗೆ ತಂದಿಲ್ಲ. ಈಗ ಮುಡಾ ಹಗರಣ ಬಯಲಿಗೆ ಬಂದ ಮೇಲೆ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ಅ. 18ರಂದು ಜಾರಿ ಮಾಡಿಯೇ ಸಿದ್ದ ಎಂದವರು ಈಗ 25ಕ್ಕೆ ಮುಂದೂಡಿದ್ದಾರೆ. ಇದರಲ್ಲೇನೋ ಕುತಂತ್ರವಿದೆ ಎಂದರು.