ಶಿವಮೊಗ್ಗ: ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಿಯಾಜ್ ಅಹಮ್ಮದ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ತಾಲ್ಲೂಕು ಅಗಸವಳ್ಳಿ ಗ್ರಾಮದ ಸರ್ವೇನಂ. 167ರಲ್ಲಿ 2033 ಎಕರೆ ಜಮೀನಿದ್ದು, ಅದರಲ್ಲಿ 1144 ಎಕರೆ ಜಮೀನನ್ನು ಸರ್ಕಾರ ಮುಳುಗಡೆ ಸಂತ್ರಸ್ಥರಿಗೆ ಹಂಚಿಕೆ ಮಾಡಿದ್ದು, ಅದರಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಕೆಲವರು ಮಾರಾಟ ಮಾಡಿದ್ದಾರೆ. ಕೆಲವರು ಜಮೀನು ಪಡೆಯದವರು ಇದ್ದಾರೆ. ಇವರನ್ನೇ ಬಂಡವಾಳ ಮಾಡಿಕೊಂಡ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ಆರ್.ಉಮೇಶ್ ಎಂಬುವವರು ರೈತರ ಜಮೀನಿಗೆ ತಂತಿ ಬೇಲಿ ಹಾಕಿ ಸುಳ್ಳು ಮಾಹಿತಿ, ಸುಳ್ಳು ದಾಖಲೆ ಸೃಷ್ಠಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2-3 ಎಕರೆ ಮುಳುಗಡೆ ಸಂತ್ರಸ್ಥರ ದಾಖಲೆಗಳು ಇದ್ದರೆ, ಇದನ್ನೇ ನೆಪಮಾಡಿಕೊಂಡು ಸುಮಾರು 40-50 ಎಕರೆ ಜಾಗಕ್ಕೆ ತಂತಿಬೇಲಿ ಹಾಕಿದ್ದಾರೆ. ಈ ಅತಿಕ್ರಮ ತಂತಿಬೇಲಿ ಹಾಕುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗಳು ಇರುವುದಿಲ್ಲ. ಅಧಿಕಾರಿಗಳು ಕೂಡ ಶಾಮಿಲಾಗಿದ್ದಾರೆ ಎಂಬ ಶಂಕೆಯಿದೆ. ಇದರಿಂದ 6 ದಶಕಗಳಿಂದಲು ಭೂ ವಂಚಿತರಾಗಿ ಸಾಗುವಳಿ ಮಾಡಿಕೊಂಡು ಜೀವನ ಸಾಗುತ್ತಿರುವ ನಿಜವಾದ ಮುಳುಗಡೆ ಸಂತ್ರಸ್ಥರು ಭೂ ವಂಚಿತರಾಗಿದ್ದಾರೆ ಎಂದರು.
ಇದಕ್ಕಾಗಿ ವಿಶೇಷ ಸಮಿತಿಯನ್ನು ಸರ್ಕಾರ ರಚಿಸಿದ್ದರು ಕೂಡ ಸಮಿತಿಯಿಲ್ಲದೆ ಇರುವುದರಿಂದ ಈ ಇಬ್ಬರು ತಾವೇ ಪುನರ್‌ವಸತಿ ಹೋರಾಟ ಹೆಸರಿನಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಸೇರಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಬೇಕು. ಮತ್ತು ವಿಶೇಷ ನ್ಯಾಯಾಧೀಶರನ್ನು ನೇಮಕ ಮಾಡಿ ಆಗಿರುವ ವಂಚನೆಯನ್ನು ಪತ್ತೆಹಚ್ಚಿ ಈ ಇಬ್ಬರು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶರಾವತಿ, ವರಾಹಿ, ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್‌ಖಾನ್ ಇದ್ದರು.