ಶಿವಮೊಗ್ಗ : ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದಿಂದ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದಾಗಿ ಬಡವರು, ಜನಸಾಮಾ ನ್ಯರು ಜೀವನ ನಡೆಸುವುದೇ ದುಸ್ತರ ವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಜನವಿರೋಧಿ ನೀತಿ ಗಳಿಂದಾಗಿ ಜನಸಾಮಾನ್ಯರು ತತ್ತರಿ ಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಣ್ಣ ಬಣ್ಣದ ಭಾಷಣಗಳ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ. ಜನಸಾ ಮಾನ್ಯರ ಹಿತಾಸಕ್ತಿ ರಕ್ಷಿಸುವಂತಹ ಕಾರ್ಯ ಮಾಡುತ್ತಿಲ್ಲ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಚೇ ದಿನ್ ಬರುತ್ತದೆ ಎಂದು ಹೇಳುತ್ತಿ ದ್ದರು. ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷ ಗತಿಸಿದರೂ ಸಹ ಇದುವರೆಗೂ ಅಚ್ಚೇ ದಿನ್ ಬಂದಿಲ್ಲ. ಬದಲಾಗಿ ಕರಾಳ ದಿನಗಳನ್ನು ನೋಡು ವಂತಾಗಿದೆ ಎಂದು ಹೇಳಿದರು.
ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಇದರಿಂದಾಗಿ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದೆ. ಕೂಡಲೇ ಪ್ರಧಾನ ಮಂತ್ರಿಗಳು ಪೆಟ್ರೋಲ್, ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕೆಂದರು.
ನೋಟ್ ಅಮಾನ್ಯೀಕರಣದ ಆತುರದ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟು ಹೋಗಿದೆ. ಜಿಡಿಪಿ ದರದಲ್ಲಿ ಗಣನೀಯ ಕುಸಿತ ಉಂಟಾಗಿದೆ. ದೇಶಾದ್ಯಂತ ನಿರುದ್ಯೋಗದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಯಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎನ್.ನಿರಂಜನ್, ಮೇಯರ್ ಏಳುಮಲೈ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮ್ಮದ್ ಯೂಸುಫ್ ಬಯ್ಯಾ ಮೊದಲಾದವರು ಹಾಜರಿದ್ದರು.