ಶಿವಮೊಗ್ಗ : ಸಾಂಸ್ಕೃತಿಕ ಚಟುವಟಿಕೆ ಮೂಲಕ ಅನಂತ ಸಾಧ್ಯತೆಗಳ ಅನ್ವೇಷಣೆ ಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿ ಕೊಳ್ಳಬೇಕು. ದಶದಿಕ್ಕುಗಳಿಂದಲೂ ಸಾಂಸ್ಕೃತಿ ಕತ್ವವನ್ನು ಆರಾಧಿಸಬೇಕು ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರ ಶೇಖರ್ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಇಂದು ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನದ ಶಾಖೆಗಳು ಆಗಾಧವಾಗಿ ತೆರೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮುಷ್ಠಿಯಷ್ಟನ್ನಾದರೂ ಪಡೆದುಕೊಳ್ಳುವ ಪ್ರಯತ್ನಮಾಡಬೇಕು ಎಂದರು.
ಬದುಕಿನ್ನುದ್ದಕ್ಕೂ ಸಾಂಸ್ಕೃತಿಕ ಕ್ಷೇತ್ರದ ಸಂಭ್ರಮವನ್ನು ಆಚರಿಸಬೇಕು. ಪುಸ್ತಕಗಳು ಸುಗಂಧವನ್ನು ಬೀರಿದರೆ ಸಾಂಸ್ಕೃತಿಕ ಕ್ಷೇತ್ರವು ಸಮಾಜದ ಇಕ್ಕಟ್ಟು-ಬಿಕಟ್ಟುಗಳನ್ನು, ವ್ಯಷ್ಟಿ- ಸಮಷ್ಠಿಯ ಸಮಸ್ಯೆಗಳನ್ನು ಎದುರಿಸಲು ಸಹಾಯಮಾಡುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಬರಲು ಇರುವ ಎಲ್ಲಾ ಸಮ ಸ್ಯೆಯನ್ನು ದೂರೀಕರಿಸಿ, ಎಂತಹ ಸವಾಲನ್ನೂ ಸಹಾ ಎದುರಿಸಲು ನೆರವಾಗುತ್ತದೆ.
ಸಹೋದರತ್ವ, ಸಮಾನತೆ, ಬಂಧು-ಬಳಗ ವನ್ನು ಸಾಂಸ್ಕೃತಿಕ ಕ್ಷೇತ್ರ ಬೆಳೆಸುತ್ತದೆ. ಜನರನ್ನು ಒಗ್ಗೂಡಿಸುತ್ತದೆ. ಕಟ್ಟುವಿಕೆ ಇಂದಿನ ತೀರಾ ಅಗತ್ಯತೆಯಾಗಿದ್ದು, ಅದನ್ನು ಇದು ಕಲಿಸುತ್ತದೆ. ಪಠ್ಯದಾಚೆಗೂ ಜಗತ್ತಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಅಂತರಂಗ ದರ್ಶನಮಾಡಿಸುತ್ತದೆ. ನಮ್ಮ ಶಕ್ತಿಯ ವಿರಾಠ್ ರೂಪವನ್ನು ತೋರಿಸಿಕೊಡುತ್ತದೆ ಎಂದರು.
ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಲಿಟ್ಟರೆ ಓದಿಗೆ ತೊಂದರೆಯಾಗುತ್ತದೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಇದನ್ನು ಬಿಟ್ಟುಬಿಡ ಬೇಕು. ಓದಿನೊಂದಿಗೆ ಸಾಂಸ್ಕೃತಿಕತೆಯನ್ನು ಬೆಳೆಸಿಕೊಂಡರೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದನ್ನು ಭಾರತ ಸಹಿತ ಜಗತ್ತಿನ ಅನೇಕ ಮಹಿಳೆಯರು ಸಾಧಿಸಿತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಅಧ್ಯಕ್ಷ ಎ.ಎಸ್. ವಿಶ್ವನಾಥ್, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿ ಪ್ರೊ. ಶಾಲಿನಿ, ಉಪಪ್ರಾಚಾರ್ಯ ಜಗದೀಶ್, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ವೇತಾ ಮೇರಿ, ಕಾರ್ಯದರ್ಶಿ ಸಿಂಧು ಉಪಸ್ಥಿತರಿದ್ದರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಚ್.ವಿ. ರಾಮಪ್ಪಗೌಡ ವಹಿಸಿದ್ದರು. ಪ್ರೊ. ಡಿ.ಜಿ. ರಮೇಶ್ ಸ್ವಾಗತಿಸಿದರು.