Thursday, April 24, 2025
Google search engine
Homeಇ-ಪತ್ರಿಕೆಕಿತ್ತೂರು ರಾಣಿ ಚೆನ್ನಮ್ಮ ನಮ್ಮೆಲ್ಲರ ಸ್ಪೂರ್ತಿ : ಎಸ್. ಸುಂದರ್‌

ಕಿತ್ತೂರು ರಾಣಿ ಚೆನ್ನಮ್ಮ ನಮ್ಮೆಲ್ಲರ ಸ್ಪೂರ್ತಿ : ಎಸ್. ಸುಂದರ್‌

ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ಶಿವಮೊಗ್ಗ : ನಮ್ಮೆಲ್ಲರ ಸ್ಪೂರ್ತಿ, ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯದೊಂದಿಗೆ ಕಾರುಣ್ಯಮೂರ್ತಿಯಾದ ಕಿತ್ತೂರಿನ ರಾಣಿ ಚೆನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ ಮನೆಯ ಪ್ರಕಾಶಕರಾದ ಎಸ್.ಸುಂದರ್ ಹೇಳಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ದೇಶ ಬ್ರಿಟಿಷರಿಂದಾಗಿ 200 ವರ್ಷಗಳ ಕಾಲ ಗುಲಾಮಗಿರಿಯಿಂದ ನಲುಗಿದ ಸಂದರ್ಭದಲ್ಲಿ, ಸ್ವಾತಂತ್ರ್ಯ ಸಂಗ್ರಾಮಕ್ಕೂ 33 ವರ್ಷಗಳ ಪೂರ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ತತ್ವ ಪ್ರೇರಣೆಯಿಂದ ಬೆಳೆದು ಬಂದ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಸಂಗ್ರಾಮ ಸಾರಿ ದೊಡ್ಡ ಜಯ ಸಾಧಿಸಿ ಕನ್ನಡ ನಾಡಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆದ ದಿನಕ್ಕೆ ಇಂದು 200 ರ ಸಂಭ್ರಮ ಎಂದರು.

 ರಾಣಿ ಚೆನ್ನಮ್ಮ ಮತ್ತೆ ಮತ್ತೆ ನಮ್ಮೆದೆಯಲ್ಲಿ ಸ್ಫೂರ್ತಿಯಾಗಿದ್ದಾರೆ. ಅವರ ಮಾರ್ಗದಲ್ಲಿ ನಡೆದು ನಮ್ಮ ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಗಂಡಿಗೆ ಸಮಾನವಾದ ದಕ್ಷತೆ, ಚಾಣಾಕ್ಷತೆ ಮತ್ತು ಜಾಣ್ಮೆಯಿಂದ ಹೋರಾಡಿದ್ದರು ಚೆನ್ನಮ್ಮ. ಅದೇ ದಕ್ಷತೆ, ಜಾಣ್ಮೆ ಪ್ರಸ್ತುತ ನಮ್ಮಲ್ಲಿ, ನಮ್ಮ ಹೆಣ್ಣುಮಕ್ಕಳಲ್ಲಿ ಇದೆಯಾ ಎಂದು ಪ್ರಶ್ನಿಸಿಕೊಳ್ಳುವ, ಪುನರಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಿದೆ ಎಂದರು.

 ಆಧುನಿಕತೆ, ವಾಣಿಜ್ಯ ಬದುಕಿನಲ್ಲಿ ಪ್ರಸ್ತುತ ಜಾಗತಿಕ ದಾಸ್ಯದಂತಹ ಸಂದರ್ಭ ಸೃಷ್ಟಿಯಾಗಿದ್ದು, ಈ ಕುರಿತು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡು ಉತ್ತರ ಕಂಡುಕೊಳ್ಳದಿದ್ದರೆ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದ ಅವರು ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರ ಭವ್ಯವಾದ ಪರಂಪರೆಯನ್ನು ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗೌರವಾಧ್ಯಕ್ಷ ಬಸವರಾಜು ಕನಗಲ್, ಕೊಳಗೇರಿ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೀತಾ ರವಿಕುಮಾರ್,  ವೀರಶೈವ ಸಮಾಜದ ಮುಖಂಡರಾದ ಹೆಚ್.ವಿ.ಮಹೇಶ್ವರಪ್ಪ , ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ  ಸಿ.ಎಸ್.ಚಂದ್ರಭೂಪಾಲ್, ಮುಖಂಡರಾದ ಎನ್.ಎಸ್.ಕುಮಾರ್, ಚನ್ನಬಸಪ್ಪ, ಮಾಲತೇಶ, ಮಂಜುನಾಥ, ವೈ.ಹೆಚ್.ನಾಗರಾಜ್ ಶಶಿಕಲ, ಬಸವರಾಜ್, ಇತರರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಂ.ಕುಮಾರ್ ವಂದಿಸಿದರು.

RELATED ARTICLES
- Advertisment -
Google search engine

Most Popular

Recent Comments