ಮಕ್ಕಳ ಕಥೆ : ಜಿಂಕೆ ಕಟ್ಟಿದ ಮನೆ
ಒಂದು ಗೊಂಡಾರಣ್ಯದಲ್ಲಿ ಒಂದು ನದಿ ತುಂಬಿ ಹರಿಯುತ್ತಿತ್ತು. ಅದರ ದಡದಲ್ಲಿ ಸೊಂಪಾಗಿ ಬೆಳೆದ ಹಸಿರು ಹುಲ್ಲುಗಾವಲು ಇತ್ತು. ಒಂದು ಸುಂದರ ಜಿಂಕೆ ಮೇವು ಅರಸಿಕೊಂಡು ಅಲ್ಲಿಗೆ ಬಂದಿತು.ಆ ಪರಿಸರ ಕಂಡು ಅದಕ್ಕೆ ತುಂಬಾ ಖುಷಿಯಾಯಿತು.‘ಎಷ್ಟು ಸೊಗಸಾಗಿದೆ ಈ ಪ್ರದೇಶ ಪ್ರಶಾಂತ ವಾಗಿರುವ ಇಲ್ಲಿಯೇ ಒಂದು ಮನೆ ಕಟ್ಟಿಕೊಂಡು ಶಾಶ್ವತವಾಗಿ ವಾಸ ಮಾಡಬೇಕು’ ಎಂದು ಯೋಚಿಸಿತು. ಮನೆ ಕಟ್ಟಲು ಯೋಗ್ಯವಾದ ಸ್ಥಳವನ್ನು ಹುಡುಕಿತು. ತನ್ನ ಕೋಡುಗಳಿಂದ ಅಲ್ಲಿರುವ ಪೊದೆಗಳನ್ನು ಕಿತ್ತು ನೆಲವನ್ನು ಸಮತಟ್ಟು ಮಾಡಿತು. ನಾಳೆ ಬಂದು ಗೋಡೆ ಕಟ್ಟುತ್ತೇನೆ ಎಂದು ನಿರ್ಧರಿಸಿ ಹೊರಟು ಹೋಯಿತು.
ಸ್ವಲ್ಪ ಹೊತ್ತಿನಲ್ಲಿ ಒಂದು ಚಿರತೆ ಆಹಾರ ಹುಡುಕಿಕೊಂಡು ಆ ಸ್ಥಳಕ್ಕೆ ಬಂದಿತು.‘ಈ ಪ್ರದೇಶ ಬಹು ಸುಂದರವಾಗಿದೆ. ನೀರು ಕುಡಿಯಲು ಬರುವ ಸಾಧು ಪ್ರಾಣಿಗಳನ್ನು ಹಿಡಿದು ಸುಲಭವಾಗಿ ಹೊಟ್ಟೆ ತುಂಬಿಸಿಕೊಳ್ಳಬಹುದು. ‘ಇಲ್ಲಿಯೇ ಒಂದು ಮನೆ ಕಟ್ಟಿಕೊಂಡು ವಾಸ ಮಾಡಬೇಕೆಂದು’ ಯೋಚಿಸಿತು. ಮನೆ ಕಟ್ಟಲು ಸರಿಯಾದ ಸ್ಥಳವನ್ನು ಹುಡುಕುವಾಗ ಜಿಂಕೆ ಸಮತಟ್ಟು ಮಾಡಿದ ನೆಲ ಕಾಣಿಸಿತು. ಚಿರತೆ ಹರ್ಷದಿಂದ, ‘ದೇವರು ದೊಡ್ಡವ, ಅವನಿಗೆ ನನ್ನ ಮನದ ಇಂಗಿತ ಅರ್ಥವಾಗಿದೆ. ಆಗಲೇ ನೆಲ ಸಮತಟ್ಟು ಮಾಡಿದ್ದಾನೆ. ನಾಳೆ ಬರುವಾಗ ಅವನೇ ಗೋಡೆ ಕಟ್ಟಿದರೂ ಆಶ್ಚರ್ಯವಿಲ್ಲ’ ಎಂದುಕೊಂಡು ಮುಂದೆ ಹೋಯಿತು.
ಮರುದಿವಸ ಜಿಂಕೆ ಬಂದು ಗೋಡೆ ಕಟ್ಟಿ ಹೋಯಿತು. ಚಿರತೆ ಬರುವಾಗ ಗೋಡೆಗಳು ಸಿದ್ಧವಾಗಿದ್ದವು. ದೇವರು ಎಷ್ಟು ದಯಾಮಯ. ನನ್ನ ವಾಸದ ಮನೆಗೆ ಗೋಡೆ ಕಟ್ಟಿಬಿಟ್ಟ. ನಾಳೆ ಬರುವಾಗ ಛಾವಣಿಯು ಸಿದ್ಧವಾದರೆ ಸಾಕು ಎಂದು ಕೊಂಡು ಚಿರತೆ ಹೊರಟು ಹೋಯಿತು.ಮರುದಿನ ಜಿಂಕೆ ಬಂದು ಛಾವಣಿಯ ಕೆಲಸ ಮುಗಿಸಿತು.
ಮನೆಯಲ್ಲಿದ್ದ ಎರಡು ಕೋಣೆಗಳ ಪೈಕಿ ಒಂದರಲ್ಲಿ ವಾಸವನ್ನು ಆರಂಭಿಸಿತು. ಆಮೇಲೆ ಚಿರತೆ ಆಗಮಿಸಿತು. ಕರುಣಾಳುವಾದ ದೇವರೆ, ನನ್ನ ವಾಸದ ಮನೆಗೆ ಛಾವಣಿಯನ್ನೂ ಮಾಡಿ ಮುಗಿಸಿದೆಯಾ? ಓಹೋ, ಇದರಲ್ಲಿ ಎರಡು ಕೊಠಡಿಗಳಿವೆ. ಒಂದರಲ್ಲಿ ನಾನು ವಾಸ ಮಾಡುತ್ತೇನೆ’ ಎಂದು ಹೇಳಿ ಅದೇ ಮನೆಯಲ್ಲಿ ನೆಲೆಸಿತು.ಜಿಂಕೆ ಹಗಲು ಕಾಡಿಗೆ ಹೋಗಿ ಹೊಟ್ಟೆ ತುಂಬಾ ಹುಲ್ಲುತಿಂದು ಬರುತ್ತಿತ್ತು. ಆಗ ಚಿರತೆ ಗಾಢವಾಗಿ ನಿದ್ರೆ ಮಾಡುತ್ತಿತ್ತು. ಅದು ರಾತ್ರಿ ಕಾಡಿಗೆ ತೆರಳಿ ಬೇಟೆಯಾಡಿ ಏನಾದಾರೂ ಮೃಗವನ್ನು ಮನೆಗೆ ಎಳೆದು ತಂದು ಬೆಳಗಾಗುವ ಮೊದಲು ಅಡುಗೆ ಮಾಡಿ ತಿಂದು ಮಲಗುತ್ತಿತ್ತು.
ಹೀಗಾಗಿ ಒಂದೇ ಮನೆಯಲ್ಲಿದ್ದರೂ ಜಿಂಕೆಗೆ ತನ್ನ ಮನೆಯಲ್ಲೇ ಚಿರತೆ ವಾಸವಾಗಿರುವ ಸಂಗತಿ ಗೊತ್ತಿರಲಿಲ್ಲ. ಚಿರತೆಗೆ ಅದು ಜಿಂಕೆಯ ಮನೆ ಎಂಬ ವಿಷಯ ತಿಳಿದಿರ ಲಿಲ್ಲ. ಆದರೂ ಒಂದು ದಿನ ರಾತ್ರಿ ಮಲಗಿದ್ದ ಜಿಂಕೆಗೆ ಒಳಗಿನ ಕೋಣೆಯಿಂದ ಸದ್ದು ಕೇಳಿಸಿ ಎಚ್ಚರವಾಯಿತು.
ಎದ್ದು ಬಂದು ಇಣುಕಿದಾಗ ಅದಕ್ಕೆ ಪ್ರಾಣವೇ ಹೋಗುವಂತಾಯಿತು. ಒಂದು ದೊಡ್ಡ ಜಿಂಕೆಯ ಶವವನ್ನು ಚಿರತೆ ಉಗುರಿನಿಂದ ಕತ್ತರಿಸುತ್ತಿತ್ತು. ಒಲೆಯ ಮೇಲೆ ದೊಡ್ಡ ಪಾತೆಯನ್ನಿಟ್ಟು ಅದನ್ನು ಬೇಯಿಸಲು ನೀರು ಕುದಿಯುತ್ತ ಇತ್ತು.
ಈ ದೃಶ್ಯವನ್ನು ನೋಡಿ ತನ್ನ ಮನೆಯೊಳಗೆ ತನಗೆ ಹಗೆಯಾಗಿರುವ ಪ್ರಾಣಿ ಸೇರಿಕೊಂಡಿರುವುದು ಅರಿವಾಯಿತು. ಅದರ ಮನವನ್ನು ಸಾವಿನ ಭಯ ಆವರಿಸಿತು. ಯಾವ ಕ್ಷಣದಲ್ಲಿ ಚಿರತೆ ತನ್ನನ್ನು ನೋಡಿ ಕೊಲ್ಲುವುದೇ ಎಂಬ ಚಿಂತೆಯಿಂದ ಅದಕ್ಕೆ ಆಹಾರ ಸೇರಲಿಲ್ಲ. ನಿದ್ರೆ ಬಳಿಗೆ ಸುಳಿಯಲಿಲ್ಲ.
ಒಂದು ದಿನ ಕಾಡಿನಲ್ಲಿ ಇರುವೆ ತಿನ್ನುವ ಚಿಪ್ಪಿನ ಹಂದಿ ಗೆಳೆಯನಾದ ಜಿಂಕೆಯನ್ನು ನೋಡಿತು. ಶರೀರ ಕೃಶವಾಗಿ ಕಡ್ಡಿಯಾಗಿದ್ದ ಅದನ್ನು ಕಂಡು ಬೇಸರದಿಂದ ‘ಯಾಕಪ್ಪ ಹೀಗಿದ್ದೀ ಯಾ,ಏನಾಯಿತು?’ ಎಂದು ಕೇಳಿತು.
ನನಗೆ ಸಾಯುತ್ತೇನೆಂಬ ಭಯ ಕಾಡುತ್ತಿದೆ ಕಣೋ, ಚಿರತೆಯೊಂದು ನನ್ನ ಮನೆಯಲ್ಲೇ ವಾಸ ವಾಗಿದೆ’ ಎಂದು ಜಿಂಕೆ ಇರುವ ವಿಷಯ ಹೇಳಿತು. ಚಿಪ್ಪಿನ ಹಂದಿ ಗೆಳೆಯನನ್ನು ಸಾಂತ್ವನಪಡಿಸಿತು. ಹೆದರಬೇಡ ಹಗೆಯನ್ನು ಮನೆಯಿಂದ ಹೊರಗೆ ಹಾಕುವ ಉಪಾಯ ಹೇಳುತ್ತೇನೆ.
ಆದರೆ ನೀನು ಅದರ ಆಹಾರವೆಂಬ ಗುಟ್ಟು ಅದಕ್ಕೆ ಗೊತ್ತಾಗಬಾರದು. ಮಣ್ಣಿನಲ್ಲಿ ಹೊರಳಾಡಿ ರೂಪ ಬದಲಿಸಿಕೋ ನಿನ್ನ ಗುರುತು ಅದಕ್ಕೆ ಸಿಗಬಾರದು. ಬಳಿಕ ನಾನು ಹೇಳಿದಂತೆ ಮಾಡು’ ನಿನಗೆ ಚಿಂತೆ ದೂರವಾಗುತ್ತದೆ’ ಎಂದು ಉಪಾಯ ಹೇಳಿಕೊಟ್ಟಿತು. ಜಿಂಕೆ ಕೆಸರಲ್ಲಿ ಹೊರಳಾಡಿ ರೂಪ ಬದಲಾವಣೆ ಮಾಡಿಕೊಂಡು ಮನೆಗೆ ಮರಳಿತು. ಮರುದಿನ ಜಿಂಕೆ ನಿದ್ರೆಯಲ್ಲಿದ್ದ ಚಿರತೆಯನ್ನು ಕೂಗಿ ಕರೆಯಿತು. ಚಿರತೆ ಕಣ್ತೆರೆದು ಅಚ್ಚರಿಯಿಂದ ‘ಅರೇ ಯಾರು ನೀನು ? ನನ್ನ ಮನೆಯೊಳಗೆ ಯಾಕೆ ಬಂದಿದ್ದೀ?’ ಎಂದು ಕೇಳಿತು.
ಇದು ನಿನ್ನ ಮನೆ ಹೇಗಾಗುತ್ತದೆ? ಮನೆಯ ನೆಲ ಸಮತಟ್ಟು ಮಾಡಿ, ಗೋಡೆ ಕಟ್ಟಿ, ಛಾವಣಿ ಕೆಲಸ ಮುಗಿಸಿದ್ದು ನಾನು’ ಎಂದಿತು ಮಾರುವೇಷದ ಜಿಂಕೆ.
ಇದ್ಯಾವುದೋ ಸಾಮರ್ಥ್ಯಶಾಲಿ ಇರಬೇಕೆಂದು ಭಾವಿಸಿದ ಚಿರತೆ ಮೃದುವಾಯಿತು. ‘ಇರಲಿ, ಈಗ ನನ್ನಿಂದ ಏನಾಗಬೇಕು’ ಹೇಳು’ ಎಂದು ಕೇಳಿತು. ನನಗೆ ನಿನ್ನ ಕೊಠಡಿಯ ಒಲೆಯ ಮೇಲೆ ಪಾತ್ರೆ ಇರಿಸಿ ನೀರು ಕುದಿಸಬೇಕಿದೆ. ಹಾಗೆಯೇ, ಒಂದಿಷ್ಟು ಉಪ್ಪು, ಮೆಣಸು, ಮಸಾಲೆ ಪದಾರ್ಥಗಳು ಬೇಕು’ ಎಂದು ಕೇಳಿತು ಜಿಂಕೆ.‘ಇದೆಲ್ಲ ನಿನಗೆ ಯಾಕೆ ಬೇಕು’ ಎಂದು ಪ್ರಶ್ನಿಸಿತು. ಯಾಕೆ ಅಂದರೆ ನಾನು ಒಂದು ಚಿರತೆಯನ್ನು ಬೇಟೆಯಾಡಿ ತಂದಿದ್ದೇನೆ. ಅದರ ಮಾಂಸವನ್ನು ಹಸಿಯಾಗಿ ತಿನ್ನಲಾಗುತ್ತದೆಯೋ? ಉಪ್ಪು, ಮಸಾಲೆ ಬೆರೆಸಿ ಬೇಯಿಸಬೇಕು. ಅದಕ್ಕಾಗಿ ನಿನ್ನನ್ನು ಕೇಳುತ್ತಿದ್ದೇನೆ. ಬೆಂದ ಮೇಲೆ ನಿನಗೂ ಸ್ವಲ್ಪ ಕೊಡುತ್ತೇನೆ’ ಎಂದು ಜಿಂಕೆ ಹೇಳಿತು.
ಜಿಂಕೆಯ ಮಾತು ಕೇಳಿ ಚಿರತೆಯ ಎದೆ ‘ಢವ ಢವ’ ಹೊಡೆದುಕೊಳ್ಳತೊಡಗಿತು. ಕೆಸರು ಮೆತ್ತಿಕೊಂಡು ಭಯಂಕರವಾಗಿ ಕಾಣುವ ಈ ಜೀವಿ ಯಾವುದೆಂದು ತನಗೆ ಗೊತ್ತಿಲ್ಲ. ನೆತ್ತಿಯಲ್ಲಿ ಹರಿತವಾದ ಕೋಡುಗಳೂ ಇವೆ. ಸಾಲದ್ದಕ್ಕೆ ಚಿರತೆಯನ್ನು ಬೇಟೆಯಾಡಿಕೊಂಡು ಬಂದಿದ್ದೇನೆಂದು ಹೇಳಿ ಅಡುಗಗೆ ಪಾತ್ರೆ-ಮಸಾಲೆ ಕೇಳುತ್ತಿದೆ.
ಇಂದಲ್ಲ , ನಾಳೆ ಹಗಲು ಮೈಮರೆತು ನಿದ್ರಿಸಿರುವಾಗ ಇದು ನನ್ನನ್ನೇ ಹಿಡಿದು ಕೊಲ್ಲಬಹುದು. ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿತು. ಇನ್ನೂ ಈ ಮನೆಯಲ್ಲೇ ಉಳಿದರೆ, ಜೀವವಂತೂ ಹೋಗುತ್ತದೆ ಎಂದು ಭಾವಿಸಿ ನಾಲಗೆ ಒಣಗಿ ಹೋಯಿತು.
ಚಿರತೆ ಮೆಲ್ಲನೆ ಎದ್ದು ಮನೆಯಿಂದ ಹೊರಗೆ ಬಂದಿತು. ‘ನಿನಗೆ ಬೇಕಾದ ಪಾತ್ರೆ ಅಲ್ಲಿಯೇ ಇದೆ. ಉಪ್ಪು, ಮೆಣಸು,ಮಸಾಲೆ ಎಲ್ಲ ಖಾಲಿಯಾಗಿದೆ. ಅಂಗಡಿಗೆ ಹೋಗಿ ತರುತ್ತೇನೆ ಎಂದು ಹೇಳಿ, ಬದುಕಿದೆಯಾ ಬಡ ಜೀವವೇ ಎನ್ನುತ್ತ ಕಾಲಿಗೆ ಬುದ್ದಿ ಹೇಳಿತು. ವೇಗವಾಗಿ ನದಿಯನ್ನು ದಾಟಿ ದೂರದ ಕಾಡಿಗೆ ಹೋಗಿ ಸೇರಿಕೊಂಡಿತು. ಚಿಪ್ಪಿನ ಹಂದಿ ಹೇಳಿಕೊಟ್ಟ ಉಪಾಯದಿಂದ ಜಿಂಕೆ ಸುಖವಾಗಿ ತನ್ನ ಮನೆಯಲ್ಲಿ ವಾಸವಾಗಿತ್ತು.
ನೀತಿ : ಅಪಾಯ ಬಂದಾಗ ಉಪಾಯ ಹುಡುಕು