ಶಿವಮೊಗ್ಗ : ಜನರ ದೂರು-ದುಮ್ಮಾನಳಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿದ್ದರೆ ತಾವು ಸಹಿಸುವುದಿಲ್ಲ, ನಿರ್ಲಕ್ಷ್ಯ ಮಾಡುವವರು ಯಾರೇಯಾದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸ್ ಇಲಾಖೆ ಸಿಬ್ಬಂದಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿದ ಬಳಿಕ ಅವರು ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಹುತೇಕ ಪ್ರಕರಣಗಳು ಬಂದಾಗ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಪೊಲೀಸರು ದೂರುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿದಿನ ಸಾರ್ವಜನಿಕರು ನನ್ನ ಬಳಿಗೆ ದೂರು ತೆಗೆದುಕೊಂಡು ಬರುತ್ತಿದ್ದಾರೆ. ಇದು ಮುಂದುವರಿದರೆ ಸಹಿಸುವುದಿಲ್ಲ. ಠಾಣೆಗೆ ಬರುವ ಜನರ ಸಮಸ್ಯೆಗಳನ್ನು ಆಲಿಸಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚಿಸಿದರಲ್ಲದೆ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳ ಓದಿಗಾಗಿ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವರಿಗೆ ವಿವಿಧ ವಿಷಯಗಳ ಅವಶ್ಯಕ ಪುಸ್ತಕಗಳನ್ನು ಒದಗಿಸಿ ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆ ಸರ್ಕಾರದ ಮುಖ. ಅಧಿಕಾರಿ ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಇಲಾಖೆಯ ಮೇಲೆ ಹೆಚ್ಚು ಜವಾಬ್ಧಾರಿ ಇದೆ. ಅದನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದರು.