ಶಿವಮೊಗ್ಗ : ಮಲೆನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಸಂಭಾವ್ಯ ಪ್ರವಾಹ ಸ್ಥಿತಿ ಎದುರಿಸಲು ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ತುಂಗಾ ಜಲಾಶಯದಿಂದ ಪ್ರಸ್ತುತ 72 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ಪ್ರಮಾಣ 80 ಸಾವಿರ ಕ್ಯೂಸೆಕ್ ಮೇಲ್ಪಟ್ಟರೆ ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.
ಈಗಾಗಲೇ ನದಿ ನೀರು ನುಗ್ಗಬಹುದಾದ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನಿರಂತರವಾಗಿ ಮೈಕ್ ಅನೌನ್ಸ್’ಮೆಂಟ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಪ್ರವಾಹ ಸ್ಥಿತಿ ನಿಭಾವಣೆಗೆ ಪಾಲಿಕೆ ಅಧಿಕಾರಿ – ಸಿಬ್ಬಂದಿಗಳನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಸೀಗೆಹಟ್ಟಿ , ರಾಮಣ್ಣಶ್ರೇಷ್ಠಿ ಪಾರ್ಕ್ ಹಾಗೂ ಬಾಪೂಜಿ ನಗರ ಬಡಾವಣೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜಲಾವೃತವಾಗುವ ಪ್ರದೇಶಗಳ ನಾಗರೀಕರಿಗೆ ಸದರಿ ಕೇಂದ್ರಗಳಲ್ಲಿ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ . ಪುರಲೆ, ವಿದ್ಯಾನಗರದಲ್ಲಿ ಮಳೆಯಿಂದ ಮನೆಗಳ ಗೋಡೆ ಕುಸಿತವಾಗಿವೆ. ಸಂತ್ರಸ್ತರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ತಾವು ಕೂಡ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದೆನೆ ಎಂದು ಆಯುಕ್ತೆ ಕವಿತಾ ಯೋಗಪ್ಪನವರ್ ಮಾಹಿತಿ ನೀಡಿದ್ದಾರೆ.
ಪರಿಶೀಲನೆ : ಗುರುವಾರ ಬೆಳಿಗ್ಗೆ ಆಯುಕ್ತೆ ಕವಿತಾ ಯೋಗಪ್ಪನವರ್ ಮತ್ತು ಪಾಲಿಕೆ ಅಧಿಕಾರಿಗಳ ತಂಡ ತುಂಗಾ ನದಿಯಂಚಿನ ತಗ್ಗು ಪ್ರದೇಶಗಳ ಬಡಾವಣೆಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿತು. ನಿವಾಸಿಗಳ ಜೊತೆ ಸಮಾಲೋಚಿಸಿತು. ಮಳೆಮುಂದುವರಿದಿರುವುದರಿಂದ ಹಾಗೂ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಎಚ್ಚರಿಕೆಯಿಂದಿರುವಂತೆ ನಿವಾಸಿಗಳಿಗೆ ಪಾಲಿಕೆ ಆಯುಕ್ತರು ಸಲಹೆ ನೀಡಿದ್ದಾರೆ.