ಸೊರಬ: ತಾಲ್ಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ವರದ ನದಿ ತುಂಬಿ ಹರಿಯುತ್ತಿರುವ ನೆರೆಯ ಲೆಕ್ಕಿಸದೇ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಇಬ್ಬರು ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ದುರಸ್ತಿ ಮಾಡಿದ ಕಾರ್ಯ ಚಂದ್ರಗುತ್ತಿ ಸಮೀಪದ ಅಂದವಳ್ಳಿ ಗ್ರಾಮದಲ್ಲಿ ನಡೆದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ವಿಭಾಗದಲ್ಲಿ ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ಅವರು ಮೂಲತಃ ವಿಜಯಪುರ ಜಿಲ್ಲೆ ಅಡವಿ ಸಂಗಾಪುರ ಗ್ರಾಮದವರು. ಕಳೆದ ೯ ವರ್ಷಗಳಿಂದ ವಿದ್ಯುತ್ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದವಳ್ಳಿ ಸಮೀಪ ವಿದ್ಯುತ್ ತಂತಿಯ ಮೇಲೆ ಬಿದುರು ಬಿದ್ದು ಸುಮಾರು 8 ಗ್ರಾಮಗಳಿಗೆ ವಿದ್ಯುತ್ ಕಡಿತಗೊಂಡಿತ್ತು.
ಮಳೆ ಹಾಗೂ ವರದಾ ನದಿಯ ನೆರೆಯನ್ನು ಲೆಕ್ಕಿಸದೇ ಬಸವರಾಜ್ ವಿದ್ಯುತ್ ಮಾರ್ಗವನ್ನು ದುರಸ್ತಿ ಮಾಡಿದ್ದಾರೆ. ಇದಕ್ಕೆ ನಾಗರಾಜ್ ಎಂಬುವವರೂ ಸಹ ಸಹಾಯ ಮಾಡಿದ್ದಾರೆ. ಇದೀಗ ಬಸವರಾಜ್ ಅವರು ಎದೆಯುದ್ದದ ನೆರೆಯಲ್ಲಿ ಇಳಿದು ವಿದ್ಯುತ್ ಮಾರ್ಗವನ್ನು ದುರಸ್ತಿ ಮಾಡಿದ್ದನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆಗಳು ಹರಿದು ಬರುತ್ತಿದ್ದು, ಮೆಸ್ಕಾಂ ಇಲಾಖೆಯ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಶ್ಲಾಘಿಸುತ್ತಿದ್ದಾರೆ.