ಬೆಂಗಳೂರು: ಭ್ರೂಣ ಲಿಂಗ ಪತ್ತೆ ಮಾಡುವವರ ಕುರಿತು ಸುಳಿವು ನೀಡುವವರಿಗೆ ರಾಜ್ಯ ಸರ್ಕಾರವು ಒಂದು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಿದೆ. ಈ ಹಿಂದೆ 50 ಸಾವಿರ ರೂ. ವನ್ನು ನೀಡಲಾಗುತ್ತಿತ್ತು.
ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮಾಡುವವರ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬಹುದು. ಇದಕ್ಕಾಗಿ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಸುಳಿವು ನೀಡುವವರ ಮಾಹಿತಿಯನ್ನು ರಹಸ್ಯವಾಗಿರಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಒಂದು ಲಕ್ಷ ರೂಪಾಯಿ ಬಹುಮಾನ ಮೊತ್ತದಲ್ಲಿ 50 ಸಾವಿರ ರೂ. ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಮತ್ತು ಇನ್ನುಳಿದ 50 ಸಾವಿರ ರೂ. ಹಣವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿಪಿಪಿಎನ್‌ಡಿಟಿ ಶುಲ್ಕದಿಂದ ಭರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಎರಡು ವರ್ಷದಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದ ತಂಡವೊಂದನ್ನು ಕಳೆದ ಅಕ್ಟೋಬರ್ನಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು. ಶಿವಲಿಂಗೇಗೌಡ, ನಯನ್ ಕುಮಾರ್, ನವೀನ್ ಕುಮಾರ್, ವಿರೇಶ್ ಎಂಬ ನಾಲ್ವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.