ದಲಿತ ಸಂಘಟನೆಗಳಿಂದ ಸರ್ಕಾರಕ್ಕೆ ಎಚ್ಚರಿಕೆ- ನಗರದಲ್ಲಿ ಬೃಹತ್ ಪ್ರತಿಭಟನೆ
ಶಿವಮೊಗ್ಗ: ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರ್ಕಾರ ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಬೆಳಗ್ಗೆ ನಗರದ ಸೈನ್ಸ್ ಮೈದಾನದಿಂದ ಬಿ.ಎಚ್. ರಸ್ತೆ, ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್, ಬಾಲರಾಜ್ ಅವರು ರಸ್ತೆ ಹಾಗೂ ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ, ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು.
ದಲಿತ ಸಂಘಟನೆಗಳ ಪ್ರಮುಖರಾದ ತಿಮ್ಲಾಪುರ ಲೋಕೇಶ್, ಶಿವಣ್ಣ ಹೆಚ್. ಭಾನುಪ್ರಸಾದ್ ಸೇರಿದಂತೆ ಮತ್ತಿತರರು ಮಾತನಾಡಿ, ಕಳೆದ ೩ ದಶಕಗಳಿಂದ ನಡೆಸಿದ ಒಳಮೀಸಲಾತಿ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪುನೀಡಿದ್ದು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮೀನಾಮೇಷ ನಡೆಸುತ್ತಿದ್ದು, ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸಬೇಕು. ಒಂದು ವೇಳೆ ಜಾರಿಗೊಳಿಸದಿದ್ದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿರುವುದಕ್ಕೆ ಕಾನೂನು ಹೋರಾಟದ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳುಲಾಗುವುದು ಎಂದು ಎಚ್ಚರಿಸಿದರು.
ಸಂವಿಧಾನದ ಪರಿಚ್ಛೇದಗಳಾದ ೧೫(೪)ನೇ ೧೬(೪)ನೇ ವಿಧಿಗಳ ಅಡಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಒಳಮೀಸಲಾತಿ ಜಾರಿ ಮಾಡಬೇಕು. ಬ್ಯಾಕ್‌ಲಾಗ್ ಸೇರಿದಂತೆ ಇತರ ಯಾವುದೇ ಹುದ್ದೆ ನೇಮಕಾತಿ ಆದೇಶವನ್ನು ಒಳಮೀಸಲಾತಿ ಜಾರಿ ಆದೇಶ ಆಗುವವರೆಗೆ ನೀಡಬಾರದು. ಜಾತಿಗಣತಿ ವರದಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಪ್ರಮುಖರಾದ ರಾಜಕುಮಾರ್ ಚಿನ್ನಯ್ಯ, ಇ.ರಮೇಶ್, ಹಾಲೇಶಪ್ಪ, ಮಹಾದೇವಪ್ಪ ಯಡೆಹಳ್ಳಿ, ಸಿ.ಮೂರ್ತಿ, ರಂಗಪ್ಪ, ಸಿದ್ದಪ್ಪ, ಶಿವಾಜಿ, ಎಸ್.ಶಿವಲಿಂಗಪ್ಪ, ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
ಕೋಟ್ಸ್
ಒಳ ಮೀಸಲು ಜಾರಿಗೆ ಈಗ ಸುಪ್ರೀಂ ಕೊರ್ಟ್ ನಿಂದಲೇ ಹಸಿರು ನಿಶಾನೆ ಸಿಕ್ಕಿದೆ. ಮೀಸಲಾತಿ ಜಾರಿ ಮಾಡುವಂತೆ ಕೋರ್ಟ್ ಕೂಡ ಹೇಳಿದೆ. ಆದರೆ ಮೀಸಲು ಜಾರಿಗೆ ಸರ್ಕಾರವೇ ಮೀನಾ ಮೇಷ ಎಣಿಸುತ್ತಿದೆ. ಸರ್ಕಾರ ಯಾರ ಪರವಾಗಿದೆ ಎನ್ನುವುದು ಸ್ಪಷ್ಟವಾಗಬೇಕಿದೆ. ಹಾಗೊಂದು ವೇಳೆ ಒಳ ಮೀಸಲನ್ನು ತಕ್ಷಣವೇ ಜಾರಿಗೆ ತರದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
– ಭಾನು ಪ್ರಸಾದ್, ದಲಿತ ಸಂಘಟನೆ ಮುಖಂಡ