ಶಿವಮೊಗ್ಗ : ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಹಾಗೂ ಪೂರ್ವಭಾವಿ ಚಿಕಿತ್ಸೆ ಪಡೆ ದುಕೊಳ್ಳುವುದರಿಂದ ಯಾವುದೇ ಕಾಯಿಲೆಯನ್ನು ನಿಯಂತ್ರಿಸಬಹು ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಹೇಳಿದರು.
ಅವರು ಇಂದು ರಾಷ್ಟ್ರೀಯ ಡೇಂಗ್ಯೂ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸ ಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡೇಂಗ್ಯೂ ಜ್ವರ ಒಂದು ಮಾರಕವಾದ ಕಾಯಿಲೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲಿದೆ. ವಿಶೇಷ ವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿ ಕೊಳ್ಳಲಿದೆ ಎಂದರು.
ಇದರ ನಿಯಂತ್ರಣಕ್ಕೆ ಸಕಾಲಿಕ ಹಾಗೂ ಸೂಕ್ತ ಚಿಕಿತ್ಸೆಯೊಂದೇ ಪರಿಹಾರ ಕ್ರಮವಾಗಿದೆ. ಈ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದಾಗಿದೆ. ಸೋಂಕು ಹೊಂದಿದ ಸೊಳ್ಳೆಯಿಂದ ಡೇಂಗ್ಯೂ ಜ್ವರ ಹರಡಲಿದೆ. ಸೋಂಕು ಹೊಂದಿದ ಸೊಳ್ಳೆ ಕಚ್ಚಿನ ೫-೭ದಿನ ಗಳೊಳಗಾಗಿ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸಬಹುದಾಗಿದೆ ಎಂದರು.
ಸಾಮಾನ್ಯವಾಗಿ ಮನೆಯಲ್ಲಿರುವ ನೀರು ಶೇಖರಣೆಯ ಸಿಮೆಂಟ್ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್, ಹೂ ಕುಂಡ ಮುಂತಾದವುಗಳಲ್ಲದೇ ಮನೆ ಸುತ್ತಮುತ ಬಯಲಿನಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪು ಟೈರುಗಳು, ಎಳನೀರಿನ ಚಿಪ್ಪು ಮತ್ತು ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗಲಿವೆ. ಈ ಸೊಳ್ಳೆಗಳು ಮನುಷ್ಯ ಸಂಪರ್ಕದಲ್ಲಿ ಹೆಚ್ಚಾಗಿರುವುದರಿಂದ ವಿಶೇಷವಾಗಿ ಹಗಲಿನಲ್ಲಿ ಕಚ್ಚುತ್ತವೆ. ಇವುಗಳು ಮನೆಯೊಳಗೆ ಹಾಗೂ ಮನೆಯ ಹೊರಗಿನ ತಂಪಾದ ವಾತಾವರಣ ದಲ್ಲಿ ವಿಕಾಸ ಹೊಂದಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ಡಾ.ರವೀಶ್, ಡಾ.ಪ್ರಶಾಂತ್, ಡಾ.ಪುರುಷೋತ್ತಮ್ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.