ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಎಸ್.ರವಿಕುಮಾರ್ ವಿಶ್ವಾಸ
ಶಿವಮೊಗ್ಗ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿಪಕ್ಷಗಳ ಹಣ, ಹೆಂಡದ ಆಮಿಷಕ್ಕೆ ಸೋಲುಂಟಾಗುವುದು ಖಚಿತವಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿರುವುದು ಗೆಲ್ಲುವುದು ನಿಶ್ಷಿತವಿದೆ ಎಂದು ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ನನಗೆ ಸೊರಬ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿದ್ದು,ಇದರ ಭಾಗವಾಗಿಯೇ ಆ ಕ್ಷೇತ್ರದ ಪ್ರತಿ ಮತದಾರರ ಮನೆ ಬಾಗಿಲಿಗೂ ತೆರಳಿ ಪಕ್ಷದ ಇಬ್ಬರು ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ಬಂದಿದ್ದೇನೆ. ಎಲ್ಲಾ ಕಡೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಸುಲಭ ಜಯಗಳಿಸಲಿದ್ದಾರೆಂದು ತಿಳಿಸಿದರು.
ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ಡೋರ್ ಟು ಡೋರ್ ಮತ ಯಾಚನೆ ನಡೆದಿದೆ. ಬೂತ್ ಮತ್ತು ವಾರ್ಡ್‌ಗಳಲ್ಲೂ ಮತಯಾಚನೆ ಕಾರ್ಯ ಬಿರುಸಿನಿಂದ ಸಾಗಿದೆ. ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಪ್ರತಿಯೊಬ್ಬ ಮತದಾರರಿಗೂ ಚಿರಪರಿಚತವೇ ಆಗಿದ್ದಾರೆ.
ಅವರು ರಾಜ್ಯ ಸಭೆ, ಲೋಕಸಭೆ, ವಿಧಾನ ಪರಿಷತ್ ಜತೆಗೆ ಒಮ್ಮೆ ವಿಧಾನಸಭೆಗೂ ಶಾಸಕರಾಗಿ ಸೇವೆ ಸಲ್ಲಿಸಿದ್ದು ಜನರಿಗೆ ಗೊತ್ತಿದೆ. ಅದನ್ನೇ ನಾವೀಗ ಪುನರ್ ಮನವರಿಕೆ ಮಾಡಿಕೊಡುತ್ತಿದ್ದೇವೆ. ಮತದಾರರ ಸ್ಪಂದನೆ ಉತ್ತಮವಾಗಿದೆ ಎಂದರು.
ಇದೇ ವೇಳೆ ವಿಪಕ್ಷಗಳ ಚುನಾವಣೆ ಚುಟುವಟಿಕೆಗಳನ್ನ ಪ್ರಸ್ತಾಪಿಸಿದ ಅವರು, ಬೇರೆ ಪಕ್ಷದವರು ಕ್ಲಬ್, ರೆಸಾರ್ಟ್ ನಂತಹ ವಾಮಮಾರ್ಗ ಹಿಡಿದಿದ್ದಾರೆ. ಆದರೆ ನಾವು ನೇರ ಮತದಾರರ ಬಳಿ ಹೋಗಿ ನಮ್ಮ ಕೆಲಸ ಕಾರ್ಯಗಳಿಗಾಗಿ ಮತ ಕೇಳುತ್ತಿದ್ದೇವೆ. ಬೇರೆ ಪಕ್ಷದವರು ಅಮಿಷವೊಡ್ಡುವುದನ್ನು ಮತದಾರರಲ್ಲಿ ಬಯಲುಗೊಳಿಸುತ್ತಿದ್ದೇವೆ. ನಾವು ಪಾರದರ್ಶಕವಾಗಿದ್ದೇವೆ ಎನ್ನುವುದು ಮತದಾರರಿಗೂ ಗೊತ್ತಿದೆ, ಹಾಗಾಗಿ, ವಿಪಕ್ಷಗಳ ಹಣ, ಹೆಂಡದ ಆಮಿಷಗಳನ್ನು ಮತದಾರರು ತಿರಸ್ಕಾರ ಮಾಡುವುದು ಗ್ಯಾರೆಂಟಿ ಆಗಿದೆ. ಅವರಿಗೆ ಸೋಲು ಖಚಿತ, ಕಾಂಗ್ರೆಸ್ ಗೆಲ್ಲುವುದು ನಿಶ್ಷಿತ ಎಂದು ತಿಳಿಸಿದರು.
ಅಯನೂರು ಪಕ್ಷಾಂತರಿಯಾಗಿ ಟಿಕೆಟ್ ದಕ್ಕಿಸಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಲ್ಲಿಅನ್ಯ ಪಕ್ಷದಿಂದ ಬಂದವರು ಅಥವಾ ಮೂಲ ಕಾಂಗ್ರೆಸ್ ಎಂಬ ಪ್ರಶ್ನೆ ಉದ್ಬವಿಸುವುದಿಲ್ಲ. ಜನರ ಮನಸೆಳೆಯುವ ಸಮರ್ಥರಿಗೆ ಮಾತ್ರ ಪಕ್ಷವು ಟಿಕೆಟ್ ನೀಡುತ್ತಿದೆ. ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಈ ಕುರಿತು ಪಕ್ಷವು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೆ ನಾವೆಲ್ಲಾ ಬದ್ದರಾಗಿರುತ್ತೇವೆ ಎಂದರು.
ರೆಸಾರ್ಟ್ ಸಂಸ್ಕೃತಿ ಗೆಲ್ಲುವುದಿಲ್ಲ. ಮನೆ ಮನೆಗೆ ತಲುಪಿದ ಪಕ್ಷ ಗೆಲ್ಲುತ್ತದೆ. ಮತದಾರರಿಗೆ ನಾವು ಯಾವುದೇ ಅಮಿಷವೊಡ್ಡದೇ ನಮ್ಮ ಸಾಧನೆ ಆಧಾರದ ಮೇಲೆ ಮತಯಾಚಿಸುವುದನ್ನು ಮುಂದುವರೆಸುತ್ತೇವೆ. ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಸುಲಭ ಜಯಗಳಿಸುತ್ತಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ತಿಮ್ಮರಾಜು, ಧೀರರಾಜ್ ಹೊನ್ನವಿಲೆ, ಕೆ. ಹರ್ಷ ಭೋವಿ, ವಿರೇಶ್ ಕ್ಯಾತಿನಕೊಪ್ಪ, ಸಿ.ಜು.ಪಾಶಾ ಹಾಗೂ ಸುರೇಶ್ ಕುಮಾರ್ ಇದ್ದರು.
ಚುನಾವಣೆ ಅಂತ ಬಂದಾಗ ಅನ್ಯ ಪಕ್ಷದಿಂದ ಬಂದವರು ಅಥವಾ ಮೂಲ ಕಾಂಗ್ರೆಸ್ ಪಕ್ಷದವರು ಅಂತ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲಾ ಕೋನಗಳಲ್ಲಿ ಅಳೆದು ತೂಗಿ ಪಕ್ಷವು ತೀರ್ಮಾನ ತೆಗೆದುಕೊಂಡಿರುತ್ತದೆ, ಅದಕ್ಕೆ ನಾವು ಬದ್ದರಾಗಿ ಕೆಲಸ ಮಾಡಬೇಕಾಗುತ್ತದೆ, ಪಕ್ಷಕ್ಕಿಂತ ನಾವು ದೊಡ್ಡವರಲ್ಲ.ಪಕ್ಷದ ತೀರ್ಮಾನ ಅಂತಿಮವಾಗಿರುತ್ತದೆ.
– ಎಸ್. ರವಿಕುಮಾರ್, ರಾಜ್ಯ ಭೋವಿ ಅಭಿವೃದ್ದಿ ನಿಗಮ ಅಧ್ಯಕ್ಷ